ಎಲ್‌ಟಿಟಿಇ ವಿರುದ್ಧ ಸಮರ ಸಾರಿರುವ ಶ್ರೀಲಂಕಾ ಸೇನಾಪಡೆ ತನ್ನ ಕಾರ್ಯಾಚರಣೆ ಮುಂದುವರಿಸಿದ್ದು, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್‌ನ ಜೆಕ್ ನಿರ್ಮಿತ 143ಸಿಂಗಲ್ ಎಂಜಿನ್ ವಿಮಾನವನ್ನು ಧ್ವಂಸಗೊಳಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಅಲ್ಲದೇ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ ಉಪಯೋಗಿಸುವ ಐದು ವಿಮಾನ ನಿಲ್ದಾಣದ ದಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿರುವ ಸೇನಾ ಮೂಲಗಳು, ಪ್ರಭಾಕರನ್ ದೇಶದಿಂದ ಪರಾರಿಯಾಗಿರುವುದಾಗಿ ವರದಿ ವಿವರಿಸಿದೆ.
ಎಲ್‌ಟಿಟಿಇ ಪ್ರಾಬಲ್ಯ ಹೊಂದಿರುವ ಕೊನೆಯ ತಾಣವಾಗಿರುವ ಮುಲ್ಲೈತ್ತಿವ್‌ನಲ್ಲಿಯೇ ಪ್ರಭಾಕರನ್ ಇರುವಿಕೆ ಬಗ್ಗೆಯಾಗಲಿ ಅಥವಾ ಬೇರೆ ಯಾವ ಪ್ರದೇಶದಲ್ಲಿ ನೆಲೆ ಕಂಡುಕೊಂಡಿರಬಹುದೆಂಬ ಬಗ್ಗೆ ನಿಖರವಾಗಿ ತಿಳಿದಿಲ್ಲ ಎಂದು ಲಂಕಾ ಅಧಿಕಾರಿಗಳು ಹೇಳಿದ್ದಾರೆ.
ಪ್ರಭಾಕರನ್ ವಿಮಾನದ ಮೂಲಕವೇ ಪರಾರಿಯಾಗಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅಧಿಕಾರಿಗಳು, ಹೆಚ್ಚಿನಂಶ ಆತ ಬೋಟ್ ಮೂಲಕವೇ ಪರಾರಿಯಾಗಿರಬೇಕೆಂದು ಶಂಕಿಸಿದ್ದಾರೆ.
ನಾವೆಲ್ಲ ಎಲ್ಲಾ ಭಾಗದಿಂದಲೂ ಸುತ್ತುವರಿದಿದ್ದೇವೆ, ಇದೀಗ ಅವರಿಗೆ ಉಳಿದಿರುವುದು ಒಂದೇ ದಾರಿ ಸಮುದ್ರಕ್ಕೆ ಹಾರಬೇಕು ಎಂದು ಲೆಫ್ಟಿನೆಂಟ್ ಜನರಲ್ ಸಾರಾತ್ ಫೋನೆಸೆಕಾ ತಿಳಿಸಿದ್ದಾರೆ. |