ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ನಿಜಕ್ಕೂ ಗಂಭೀರವಾದದ್ದು ಹಾಗೂ ಆ ನಿಟ್ಟಿನಲ್ಲಿ ನಾವು ಶೀಘ್ರವಾಗಿ ಕ್ರಮಕೈಗೊಳ್ಳುವ ಮೂಲಕ ತನಿಖೆಯನ್ನು ಪೂರ್ಣಗೊಳಿಸುವುದಾಗಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ನಡೆದ ಘಟನೆ ಗಂಭೀರವಾಗಿ ಪರಿಗಣಿಸಿದ್ದು, ನಾವು ಈಗಾಗಲೇ ತನಿಖೆಯನ್ನು ಆರಂಭಿಸಿದ್ದು, ಅದರ ಪೂರ್ಣ ಫಲಿತಾಂಶ ಶೀಘ್ರವೇ ಬಹಿರಂಗಗೊಳಿಸಲಾಗುವುದು ಎಂದು ಫೈನಾನ್‌ಶಿಯಲ್ ಟೈಮ್ಸ್ ಡೈಲಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಲ್ಲದೇ ದಾಳಿಯಲ್ಲಿ ಭಾಗಿಯಾದ ಶಂಕಿತ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಾಗಿಯೂ ಗಿಲಾನಿ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
ಮುಂಬೈ ದಾಳಿಯಲ್ಲಿ ಶಾಮೀಲಾದ ಶಂಕಿತ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಲು ತಾವು ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಏನನ್ನೂ ಆಲೋಚಿಸಿಲ್ಲ. ಆದರೆ ನೆರೆಯ ದೇಶದೊಂದಿಗೆ ನಮ್ಮ ಸಂಬಂಧದ ಮೇಲೆ ಅವಲಂಬಿತವಾಗಿದೆ ಎಂದರು.
ಮುಂಬೈ ದಾಳಿ ತನಿಖೆಯನ್ನು ಅಲ್ಲಗಳೆಯುವಿಕೆಯ ಬಳಿಕ ಶೀಘ್ರವಾಗಿ ಕೈಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಶೀಘ್ರ ಕ್ರಮ ಕೈಗೊಂಡಿದ್ದೇವೆ ಎಂಬುದಾಗಿ ಹೇಳಿದರು.
ಮುಂದಿನ ನಮ್ಮತನಿಖೆ ಪೂರ್ಣಗೊಳ್ಳವವರೆಗೆ ಭಾರತ ಸಂಪೂರ್ಣ ಸಹಕಾರ ನೀಡಬೇಕು ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಗಿಲಾನಿ ತಿಳಿಸಿದ್ದಾರೆ.
ಮುಂಬೈ ದಾಳಿಯಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ತಮ್ಮ ದೇಶದ ಪ್ರಜೆ ಎಂಬುದನ್ನು ಒಪ್ಪಲು ಕೂಡ ಪಾಕ್ ಇಬ್ಬಗೆಯ ನೀತಿ ತೋರಿ, ಕೊನೆಗೆ ಒಪ್ಪಿಕೊಂಡಿತ್ತು. ಅಲ್ಲದೇ ತನ್ನ ನೆಲದ ಉಗ್ರರು ಭಾಗಿ ಎಂಬುದನ್ನೂ ಕೂಡ ಪಾಕ್ ಒಪ್ಪಲು ತಯಾರಿಲ್ಲವಾಗಿತ್ತು. ಅಂತಿಮವಾಗಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್ ಇದೀಗ ಭಾರತ ನೀಡಿರುವ ಪುರಾವೆಯನ್ನು ಸ್ವತಃ ತನಿಖೆ ನಡೆಸುವುದಾಗಿ ಹೇಳಿತ್ತು. |