ಬ್ರಿಟಿಷ್ ರಾಜಕುಮಾರ ಹ್ಯಾರಿ ತನ್ನ ಗೆಳತಿ ಚೆಲ್ಸಿ ಡೇವಿಯೊಂದಿಗಿನ ಐದು ವರ್ಷಗಳ ಕಾಲದ ಸಂಬಂಧವನ್ನು ಮುರಿದುಕೊಂಡಿರುವುದಾಗಿ ಭಾನುವಾರ ಮಾಧ್ಯಮ ವರದಿ ತಿಳಿಸಿದೆ.
25ರ ಹರೆಯದ ರಾಜಕುಮಾರ ಸೇನಾ ಹೆಲಿಕಾಫ್ಟರ್‌ನ ಫೈಲಟ್ ತರಬೇತಿ ಪಡೆಯುತ್ತಿದ್ದಾರೆ. ಅವರ ಗೆಳತಿ 23ರ ಹರೆಯದ ಚೆಲ್ಸಿ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಅಭ್ಯಾಸ ನಡೆಸುತ್ತಿದ್ದಾರೆ.
ಅವರು ರಜಾಕಾಲವನ್ನು ಒಟ್ಟಿಗೆ ಕಳೆದ ಕೆಲವು ವಾರಗಳಲ್ಲೇ ಬೇರೆಯಾಗಿದ್ದಾರೆ ಎಂದು ಸಂಡೆ ಟೈಮ್ಸ್ ರಾಜಮನೆತನದ ಮೂಲವನ್ನು ಉಲ್ಲೇಖಿಸಿ ಹೇಳಿದೆ. ನ್ಯೂಸ್ ಆಫ್ ದಿ ವರ್ಲ್ಡ್ ವೆಬ್‌ಸೈಟಿನಲ್ಲಿ ಸುದ್ದಿಯೊಂದು ಪ್ರಕಟವಾದ ಬಳಿಕ ಅವರು ಬೇರ್ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹ್ಯಾರಿಯ ಜೀವನಶೈಲಿಯಿಂದ ಬೇಸತ್ತಿರುವ ಚೆಲ್ಸಾಳೇ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಳು ಎಂಬುದಾಗಿ ಆಕೆಯ ಸ್ನೇಹಿತರು ಹೇಳಿದ್ದಾರೆ ಎಂದು ವೆಬ್‌ಸೈಟ್ ಹೇಳಿದೆ. ಇವರಿಬ್ಬರು ಮಾರಿಶಸ್‌ನಲ್ಲಿ ರಜೆ ಕಳೆದ ಬಳಿಕ ಬೇರೆಬೇರೆಯಾಗಿದ್ದಾರೆ.
2004ರಿಂದ ಗೆಳೆತನ ಹೊಂದಿದ್ದ ಇವರು ಮೂರು ವರ್ಷಗಳ ಬಳಿಕ ಅಲ್ಪಕಾಲ ದೂರವಾಗಿದ್ದರು. ಆದರೆ ಬಳಿಕ ಅವರು ರಾಜಿಯಾಗಿದ್ದರು. ಇದೀಗ ಮತ್ತೆ ಇವರೊಳಗೆ ಬಿರುಕು ಮೂಡಿದ್ದು ಮತ್ತೆ ಒಂದಾಗುವ ಸಾಧ್ಯತೆ ಕಡಿಮೆ ಎಂಬುದಾಗಿ ವರದಿ ಹೇಳಿದೆ. |