ಮುಖ್ಯವಾದ ಗುಪ್ತಚರ ಮಾಹಿತಿ ತನ್ನ ಬಳಿ ಇದ್ದಲ್ಲಿ ಪಾಕಿಸ್ತಾನದ ಒಳಗಿನ ಅಲ್ ಖೈದಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕ ಹಿಂಜರಿಯುವುದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೋಸೆಫ್ ಬಿಡೆನ್ ಸೋಮವಾರ ಖಾರವಾಗಿ ತಿಳಿಸಿದ್ದಾರೆ.
ಅಧ್ಯಕ್ಷ ಬರಾಕ್ ಒಬಾಮ ಅವರ ಚುನಾವಣಾ ಪ್ರಚಾರ ಕಾಲದ ಪ್ರತಿಜ್ಞೆಯನ್ನು ಪ್ರತಿಧ್ವನಿಸಿದ ಅವರು, ಅಮೆರಿಕದ ಅಧ್ಯಕ್ಷರು ತಮ್ಮ ಚುನಾವಣಾ ಪ್ರಚಾರ ಕಾಲದಲ್ಲಿ ಅಲ್ ಖೈದಾ ಸಿಬ್ಬಂದಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ಯೋಗ್ಯ ಮಾಹಿತಿ ಇದ್ದಲ್ಲಿ ಅದರ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದು, ಈ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.
ಪಾಕಿಸ್ತಾನದ ಒಳಗಿನ ಬುಡಕಟ್ಟು ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಅಮೆರಿಕದ ಕ್ಷಿಪಣಿ ದಾಳಿ ಬಗ್ಗೆ ಕೇಳಲಾದ ಪ್ರಶ್ನೆಗೆ ಬಿಡೆನ್ ಈ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಈ ಕ್ರಮಗಳನ್ನು ಒಬಾಮ ಮಂಜೂರು ಮಾಡಿದ್ದರೆ ಅಥವಾ ಈ ನಿಟ್ಟಿನಲ್ಲಿ ಬುಷ್ ಆಡಳಿತದ ನೀತಿ ಮುಂದುವರಿಯುವುದೇ ಎಂದು ಬಿಡೆನ್ ಅವರನ್ನು ಪ್ರಶ್ನಿಸಲಾಗಿತ್ತು.
ಯಾವುದೇ ನಿರ್ದಿಷ್ಟ ದಾಳಿಯ ಬಗ್ಗೆ ನಾನು ಮಾತನಾಡಲಾರೆ. ಹಾಗೆ ಮಾಡುವುದು ಸಮಂಜಸವಲ್ಲ ಎಂದ ಅವರು , ಗಡಿಯಾಚೆಗಿನ ಚಟುವಟಿಕೆಗೆ ಮುನ್ನ ಬರಾಕ್ ಆಡಳಿತ ಪಾಕಿಸ್ತಾನಕ್ಕೆ ತಿಳಿಸುವುದೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಬಿಡೆನ್ ನಿರಾಕರಿಸಿದರು.
|