' ಅಮೆರಿಕದವರು ಮುಸ್ಲಿಮರ ಶತ್ರುವಲ್ಲ' ಎಂಬುದಾಗಿ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಅವರು ಮುಸ್ಲಿಂ ರಾಷ್ಟ್ರಗಳಿಗೆ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ತಾನು ಕೂಡ ಹಲವಾರು ವರ್ಷಗಳ ಕಾಲ ಇಂಡೋನೇಷ್ಯಾದಲ್ಲಿ ಕಾಲ ಕಳೆದಿರುವುದಾಗಿ ಹೇಳಿರುವ ಒಬಾಮ, ಆ ನಿಟ್ಟಿನಲ್ಲಿ ಮುಸ್ಲಿಂ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದು, ನಿಮಗೆ ನಮ್ಮ ಮೇಲಿರುವ ಅಪನಂಬಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುವುದಾಗಿ ಹೇಳಿದ್ದು,ನಿಮ್ಮ ಕನಸುಗಳು ಸಾಕಾರಗೊಳ್ಳಲಿದೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ.ಅಮೆರಿಕವಾಗಲಿ, ಅಮೆರಿಕದ ಜನರಾಗಲಿ ಮುಸ್ಲಿಂ ಜಗತ್ತಿನ ಶತ್ರುಗಳು ಅಲ್ಲ ಎಂಬುದನ್ನು ಮನವರಿಕೆ ಮಾಡುವುದೇ ನನ್ನ ಕರ್ತವ್ಯವಾಗಿದೆ. ಆದರೂ ಕೆಲವೊಮ್ಮೆ ನಾವು ತಪ್ಪು ಮಾಡಿದ್ದೇವೆ, ನಾವೇನೂ ಪರಿಪೂರ್ಣರು ಎಂದು ಹೇಳುತ್ತಿಲ್ಲ ಎಂಬುದಾಗಿ ಬರಾಕ್ ಅವರು ಅಲ್ ಅರಾಬಿಯಾ ಸೆಟಲೈಟ್ ಟೆಲಿವಿಷನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.ಬದಲಾವಣೆಯ ಶಕೆಯನ್ನು ನೀವು ನಿರೀಕ್ಷಿಸಿ ಎಂದಿರುವ ಬರಾಕ್, ಅಮೆರಿಕ ಊಳಿಗಮಾನ್ಯ ಶಕ್ತಿಯಿಂದ ಉದಯಿಸಿದ ರಾಷ್ಟ್ರವಲ್ಲ ಮತ್ತು ನಾವು ಕೂಡ ನಿಮ್ಮನ್ನು ಸಮಾನ ದೃಷ್ಟಿಕೋನದಲ್ಲೇ ನೋಡುತ್ತೇವೆ. ಕಳೆದು 20-30 ವರ್ಷಗಳ ಹಿಂದೆ ಅಂತಹ ಬೆಳವಣಿಗೆ ನಡೆದು ಬಂದಿದೆಯಾದರೂ, ಉತ್ತಮ ಬೆಳವಣಿಗೆಯನ್ನು ಪುನರ್‌ಸ್ಥಾಪಿಸಲು ಸಾಧ್ಯ ಎಂದು ಹೇಳಿದರು.2008 ರ ಅಧ್ಯಕ್ಷ ಪದವಿ ಚುನಾವಣೆ ಸಂದರ್ಭದಲ್ಲಿಯೇ ಬರಾಕ್ ಅವರು, ಅಮೆರಿಕ ಮತ್ತು ಮುಸ್ಲಿಮ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸುಧಾರಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಪ್ರಮುಖ ಮುಸ್ಲಿಮ್ ರಾಷ್ಟ್ರಗಳಿಗೆ ಭೇಟಿ ನೀಡಿ ಮಾತುಕತೆ ನಡೆಸುವುದಾಗಿಯೂ ಹೇಳಿರುವ ಹಿನ್ನೆಲೆಯಲ್ಲಿ ಈ ಸಂದೇಶವನ್ನು ರವಾನಿಸಿದ್ದಾರೆ. |