ತಮಿಳು ವ್ಯಾಘ್ರ ವೇಲುಪಿಳ್ಳೈ ಪ್ರಭಾಕರನ್ ಎಲ್ಲಿಗೂ ಪರಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿರುವ ಎಲ್‌ಟಿಟಿಇ ವರಿಷ್ಠ ಮುಖಂಡ, ಈಗಲೂ ಶ್ರೀಲಂಕಾದಲ್ಲೇ ಇದ್ದು, ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.ಪ್ರಭಾಕರನ್ ಶ್ರೀಲಂಕಾ ಬಿಟ್ಟು ಓಡಿಹೋಗಿಲ್ಲ ಎಂದು ಎಲ್‌ಟಿಟಿಇಯ ರಾಜಕೀಯ ವಿಭಾಗದ ವರಿಷ್ಠ ಬಿ.ನಟೇಸನ್ ಸ್ಪಷ್ಟಪಡಿಸಿದ್ದು, ಪ್ರಭಾಕರನ್ ಈಗಲೂ ನಮ್ಮ ಜನರೊಂದಿಗೆ ಇದ್ದಾರೆ. ಹಾಗೂ ತಮ್ಮ ಸ್ವಾತಂತ್ರ್ಯದ ಹೋರಾಟವನ್ನು ಮುಂದುವರಿಸಲಿದ್ದಾರೆ ಎಂದು ಲಂಕಾ ಸೇನೆಗೆ ತಿರುಗೇಟು ನೀಡಿದ್ದಾರೆ.ಶ್ರೀಲಂಕಾ ಸೇನೆ ಎಲ್‌ಟಿಟಿಇ ಪ್ರಮುಖ ಕಾರಸ್ಥಾನಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಸಂಪೂರ್ಣವಾಗಿ ಅವರ ಹುಟ್ಟಡಗಿಸಿದ್ದೇವೆ, ಎಲ್‌ಟಿಟಿಇ ವರಿಷ್ಠ ಪ್ರಭಾಕರನ್‌ಗೆ ಬೇರೆ ದಾರಿಯೇ ಇಲ್ಲ ಎಂಬ ಸೇನೆಯ ಹೇಳಿಕೆ ನಂತರ, ನಟೇಸನ್ ಬಿಬಿಸಿಗೆ ಸೆಟಲೈಟ್ ದೂರವಾಣಿ ಮೂಲಕ ನೀಡಿದ ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.ಭಾನುವಾರ ಮುಲ್ಲೈತೀವು ಪ್ರದೇಶವನ್ನು ಸೇನೆ ವಶಪಡಿಸಿಕೊಂಡಿರುವುದಾಗಿ ಲಂಕಾ ಮಿಲಿಟರಿ ವರಿಷ್ಠ ಸಾರಥ್ ಫೋನೆಸೇಕಾ ಅವರು, ಪ್ರಭಾಕರನ್ ಎಲ್ಲಿ ಅಡಗಿರಬಹುದು ಎಂಬ ಖಚಿತ ಮಾಹಿತಿ ಇಲ್ಲ. ಬಹುತೇಕ ಆತ ದ್ವೀಪ ಪ್ರದೇಶದಿಂದ ಪಲಾಯನಗೈದಿರಬೇಕು ಎಂದು ಶಂಕಿಸಿದ್ದರು.ಆದರೆ ಇದೀಗ ಲಂಕಾ ಸೇನೆಗೆ ಸಡ್ಡು ಹೊಡೆಯುವ ರೀತಿಯಲ್ಲಿ, ಪ್ರಭಾಕರನ್ ಶ್ರೀಲಂಕಾದಲ್ಲೇ ಇದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಸೇನೆಯ ನಿದ್ದೆಗೆಡಿಸಿದಂತಾಗಿದೆ. |