ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ನೀಡಿರುವ ಪುರಾವೆಗೆ ಜನವರಿ 29ರೊಳಗೆ ಪ್ರತಿಕ್ರಿಯೆ ನೀಡುವುದಾಗಿ ಪಾಕಿಸ್ತಾನ ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ತಿಳಿಸಿದೆ.
ಮುಂಬೈ ದಾಳಿಯ ಹಿಂದೆ ಪಾಕ್ ನೆಲದ ಉಗ್ರಗಾಮಿ ಸಂಘಟನೆಗಳು ಶಾಮೀಲಾಗಿರುವ ಬಗ್ಗೆ ಭಾರತ ಪುರಾವೆಗಳನ್ನು ಹಸ್ತಾಂತರಿಸಿದ್ದು, ಅದಕ್ಕೆ ಹತ್ತು ದಿನಗಳೊಳಗೆ ಉತ್ತರ ನೀಡುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ ಪಾಕ್ ನೀಡಿದ ಗಡುವು ಮಂಗಳವಾರವೇ ಅಂತ್ಯಗೊಂಡಿದ್ದು, ಈವರೆಗೂ ಯಾವುದೇ ಅಭಿಪ್ರಾಯ ತಿಳಿಸಿಲ್ಲ.
ದಾಳಿ ಘಟನೆ ಕುರಿತಂತೆ ಪಾಕಿಸ್ತಾನ ತನ್ನ ತನಿಖೆಯ ಡೆಡ್‌ಲೈನ್ ಅನ್ನು ಎರಡು ದಿನಗಳ ಕಾಲ ವಿಸ್ತರಿಸಿದ್ದು, ಭಾರತಕ್ಕೆ ಶೀಘ್ರವೇ ವಿವರಣೆ ನೀಡಲಾಗುವುದು ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಭಾರತ ನೀಡಿರುವ ಮಾಹಿತಿಯ ಬಗ್ಗೆ ಪಾಕಿಸ್ತಾನ ತನಿಖೆ ನಡೆಸುತ್ತಿದ್ದು, ಅದೀಗ ಪೂರ್ಣಗೊಂಡಿರುವುದಾಗಿ ಹೇಳಿರುವ ಮಲಿಕ್, ಯಾವುದೇ ಕಾರಣಕ್ಕೂ ದೇಶದ ಪ್ರಜೆಯನ್ನು ಬೇರೆ ದೇಶಕ್ಕೆ ಹಸ್ತಾಂತರಿಸುವ ಅವಕಾಶ ಪಾಕ್‌ನ ಭಯೋತ್ಪಾದನಾ ನಿಗ್ರಹ ಕಾಯ್ದೆಯಾಗಲಿ, ಯಾವುದರಲ್ಲೂ ಅವಕಾಶ ಇಲ್ಲ ಎಂದು ಮತ್ತೊಮ್ಮೆ ಗುಡುಗಿದ್ದಾರೆ. |