ಕೆಲಸ ಕಳೆದುಕೊಂಡ ನೋವಿನಲ್ಲಿ ವ್ಯಕ್ತಿಯೋರ್ವ ಪತ್ನಿ, ಐದು ಮಕ್ಕಳು ಸೇರಿದಂತೆ ತಾನು ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆಯೊಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ತನ್ನ ಹೆಂಡತಿ, ಎಂಟರ ಹರೆಯದ ಮಗಳು, ಐದರ ಹರೆಯದ ಎರಡು ಅವಳಿ ಮಕ್ಕಳು ಹಾಗೂ ಎರಡರ ಹರೆಯದ ಅವಳಿ ಗಂಡು ಮಕ್ಕಳನ್ನು ಕೊಂದು, ನಂತರ ತಂದೆ ತನ್ನನ್ನು ತಾನೇ ಕೊಂದುಕೊಂಡ ಘಟನೆ ನಡೆದಿರುವುದಾಗಿ ಪೊಲೀಸ್ ಸಹಾಯಕ ವರಿಷ್ಠ ಕೆನ್ನತ್ ಗಾರ್ನೆರ್ ತಿಳಿಸಿದ್ದಾರೆ.
ತನಿಖೆ ನಡೆಸುತ್ತಿದ್ದ ವೇಳೆ ಮನೆಯಲ್ಲಿ ರಿವಾಲ್ವರ್ ಕೂಡ ದೊರೆತಿರುವುದಾಗಿ ಅವರು ಹೇಳಿದ್ದಾರೆ. ತನ್ನ ಕುಟುಂಬ ಸಾಮೂಹಿಕವಾಗಿ ಸಾವಿಗೆ ಶರಣಾಗುತ್ತಿರುವ ಬಗ್ಗೆ ಆತ ಬರ್‌ಬ್ಯಾಂಕ್ ಟೆಲಿವಿಷನ್‌ಗೆ ಟೈಪ್ ಮಾಡಿದ ಪತ್ರವೊಂದನ್ನು ಕಳುಹಿಸಿರುವುದಾಗಿಯೂ ಪೊಲೀಸರಿಗೆ ವಿವರಣೆ ನೀಡಿದೆ.
ನಾವು ಸಾಯುವ ಮೂಲಕ ಮಕ್ಕಳನ್ನೇಕೆ ಅನಾಥರನ್ನಾಗಿ ಮಾಡಿಹೋಗಬೇಕು. ಅದಕ್ಕಾಗಿ ಮಕ್ಕಳನ್ನು ಸಾಯಿಸಿರುವುದಾಗಿ ಆತ ಪತ್ರದಲ್ಲಿ ಬರೆದಿರುವುದಾಗಿ ಟೆಲಿವಿಷನ್ ವರದಿ ತಿಳಿಸಿದೆ.
ಕೆಲಸ ಕಳೆದುಕೊಂಡ ಬೇಗುದಿಯಲ್ಲಿ ಇಡೀ ಕುಟುಂಬ ಮರ್ಡರ್ ಹಾಗೂ ಆತ್ಮಹತ್ಯೆಗೆ ಶರಣಾಗಿರುವುದಾಗಿ ಲಾಸ್ ಏಂಜಲೀಸ್ ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ಇರ್ವಿನ್ ಆಂಟೊನಿಯೋ ಲೂಪೆ ಹಾಗೂ ಆತನ ಪತ್ನಿ ಅನಾ ಇಬ್ಬರೂ ಪಶ್ಚಿಮ ಲಾಸ್ ಏಂಜಲೀಸ್‌ನ ಕೈಸೆರ್ ಪೆರಮಾನೆಂಟೆ ಮೆಡಿಕಲ್ ಸೆಂಟರ್‌ನ ಮಾಜಿ ಉದ್ಯೋಗಿಗಳಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಪೊಲೀಸ್ ತನಿಖೆಗೆ ಆಸ್ಪತ್ರೆ ಸಿಬ್ಬಂದಿಗಳು ಸಹಕರಿಸಲಿದ್ದಾರೆ ಎಂದು ವಿವರಿಸಿದೆ. |