ಆರ್ಥಿಕವಾಗಿ ಬಹಳಷ್ಟು ಕುಸಿತ ಕಂಡಿರುವ ಪಾಕಿಸ್ತಾನವನ್ನು ಮತ್ತಷ್ಟು ಸಬಲಗೊಳಿಸಲು ಅಮೆರಿಕ ಆರ್ಥಿಕ ನೆರವು ನೀಡಿ ರಕ್ಷಿಸಬೇಕಾಗಿದೆ. ಅಲ್ಲದೇ ಭಯೋತ್ಪಾದಕರನ್ನು ಮಟ್ಟ ಹಾಕಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅಮೆರಿಕಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನೀವು ನಮಗೆ ಆರ್ಥಿಕ ನೆರವಿನೊಂದಿಗೆ, ಆಧುನಿಕ ಶಸ್ತ್ರಾಸ್ತ್ರವನ್ನೂ ಒದಗಿಸಿ, ನಾವು ಭಯೋತ್ಪಾದಕರನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತೇವೆ ಎಂದು ಜರ್ದಾರಿ ಅವರು ತಿಳಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ವಿವರಿಸಿದ್ದು, ನೂತನವಾಗಿ ಅಧ್ಯಕ್ಷರಾದ ಬರಾಕ್ ಒಬಾಮ ಅವರಿಗೆ ಅಭಿನಂದನೆಯನ್ನು ಸಲ್ಲಿಸಿರುವುದಾಗಿ ಹೇಳಿದೆ.
ಪಾಕಿಸ್ತಾನ ಉಗ್ರರನ್ನು ಸದೆ ಬಡಿಯುತ್ತದೆ ಎಂಬುದನ್ನು ಬರಾಕ್ ಅವರು ಅರ್ಥಮಾಡಿಕೊಳ್ಳುತ್ತಾರೆ. ಇದು ನಿಜಕ್ಕೂ ಆಗಬೇಕಾದ ಕೆಲಸ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಅದರ ಅಗತ್ಯ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಧರ್ಮಾರ್ಥ ಸಂಸ್ಥೆಯಲ್ಲ, ಅಂದರೆ ರಾಜಕೀಯವಾಗಿ ಸುಸ್ಥಿರವಾಗಿದ್ದರು ಕೂಡ ಆರ್ಥಿಕವಾಗಿ ಮತ್ತಷ್ಟು ಬಲಗೊಳ್ಳಬೇಕಿದೆ. ಅದಕ್ಕೆ ಅಮೆರಿಕದ ನೆರವಿನ ಅಗತ್ಯವಿದೆ. ಆ ನಿಟ್ಟಿನಲ್ಲಿ ಒಬಾಮ ಆಡಳಿತ ಪಾಕಿಗೆ ನೆರವು ನೀಡುವ ಹಾಗೂ ಕಾರ್ಯಪ್ರವೃತ್ತವಾಗುವಲ್ಲಿ ಯುಎಸ್ ಕಾಂಗ್ರೆಸ್ ಬೆಂಬಲಿಸಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಜಾಪ್ರಭುತ್ವ ಬಲಯುತವಾಗಿದೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸಲು, ಆರೋಗ್ಯ ಕೇಂದ್ರ, ಮನೆಗಳ ಅಭಿವೃದ್ದಿಗೆ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
|