ತಮಿಳು ಬಂಡುಕೋರರು ಮತ್ತು ಶ್ರೀಲಂಕಾ ಸೇನೆ ನಡುವೆ ನಡೆದ ಘರ್ಷಣೆಯಲ್ಲಿ 2006ರ ಜುಲೈಯಿಂದ ಈವರೆಗೆ 13ಸಾವಿರ ಎಲ್‌ಟಿಟಿಇ ಹಾಗೂ 3700ಸೈನಿಕರು ಸಾವನ್ನಪ್ಪಿರುವುದಾಗಿ ಶ್ರೀಲಂಕಾ ಮಿಲಿಟರಿ ಬುಧವಾರ ಅಂಕಿ-ಅಂಶ ಸಹಿತ ವಿವರಣೆ ನೀಡಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿಯೇ 1500 ತಮಿಳು ಬಂಡುಕೋರರು ಸಾವನ್ನಪ್ಪಿದ್ದು, 150 ಲಂಕಾ ಸೈನಿಕರು ಬಲಿಯಾಗಿರುವುದಾಗಿ ಮಿಲಿಟರಿ ವಕ್ತಾರ ಉದಯ ನಾನಯಕ್ಕಾರಾ ತಿಳಿಸಿದ್ದಾರೆ.
ದೇಶದಲ್ಲಿ ತಲೆ ಎತ್ತಿರುವ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಶೇ.95ರಷ್ಟು ಯಶಸ್ಸು ಸಾಧಿಸಿರುವುದಾಗಿ ಈಗಾಗಲೇ ಸರ್ಕಾರ ಅಧಿಕೃತವಾಗಿ ಘೋಷಿಸಿತ್ತು. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ ವಿರುದ್ಧದ ಕಾರ್ಯಾಚರಣೆ ಅಂತಿಮ ಹಂತದಲ್ಲಿದ್ದು, ಪ್ರಮುಖ ನೆಲೆಗಳನ್ನು ಸೇನೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದೆ.
ಎಲ್‌ಟಿಟಿಇ ವಿರುದ್ಧದ ಗೆಲುವು 2ನೇ ಸ್ವಾತಂತ್ರ್ಯದ ಸಂತಸ: ಕಳೆದ ಎರಡು ದಶಕಗಳಿಂದ ಪ್ರತ್ಯೇಕತವಾದಿ ಹೋರಾಟವನ್ನು ನಡೆಸುತ್ತಾ ಸರ್ಕಾರಕ್ಕೆ ಕಂಟಕವಾಗಿದ್ದ ಎಲ್‌ಟಿಟಿಇ ವಿರುದ್ದದ ಗೆಲುವು ಶ್ರೀಲಂಕಾಕ್ಕೆ ಎರಡನೇ ಸ್ವಾತಂತ್ರ್ಯ ದೊರೆತಂತಾಗಿದೆ ಎಂದು ರಕ್ಷಣಾ ವಕ್ತಾರ ಕೆಲಿಯಾ ರಾಮ್‌ಬುಕ್ವೆಲ್ಲಾ ಬಣ್ಣಿಸಿದ್ದಾರೆ. |