ಕಳೆದ ವರ್ಷ ನವೆಂಬರ್‌ನಲ್ಲಿ ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ದಾಳಿ ನಿಜಕ್ಕೂ ನಿಮ್ಮ ಸಮಸ್ಯೆಯೇ ವಿನಃ, ಅದು ಭಾರತದ ಸಮಸ್ಯೆಯಲ್ಲ ಎಂದು ಸುಮಾರು 100ಕ್ಕೂ ಅಧಿಕ ಪ್ರಭಾವಿ ಭಾರತೀಯ ಮೂಲದ ಅಮೆರಿಕನ್‌ರು ಇಲ್ಲಿನ ವರಿಷ್ಠರನ್ನು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದು, ಆ ನಿಟ್ಟಿನಲ್ಲಿ ಅಮೆರಿಕವೇ ಒತ್ತಡ ಹೇರಿ, ಪಾಕಿಸ್ತಾನದಲ್ಲಿನ ಉಗ್ರರನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಭಯೋತ್ಪಾದನೆಯ ಕುಡಿಯೊಡೆದಿದ್ದು ಪಾಕಿಸ್ತಾನದಲ್ಲೇ ಅಲ್ಲ,ತಾಲಿಬಾನ್, ಅಲ್ ಕೈದಾದ ಬೆಳವಣಿಗೆಗೆ ಅಮೆರಿಕದ ಕೊಡುಗೆಯೂ ಇದೆ ಎಂದು ಗಂಭೀರವಾಗಿ ಆರೋಪಿಸಿರುವ ಅವರು, ಇದರಲ್ಲಿ ಆಶ್ಚರ್ಯಪಡಬೇಕಾದ್ದು ಏನೂ ಇಲ್ಲ, ಅವರೀಗ ಅಮೆರಿಕ ಸೇರಿದಂತೆ ಪ್ರಪಂಚದ ಎಲ್ಲಾ ಭಾಗಗಳಲ್ಲೂ ತಮ್ಮ ಭಯೋತ್ಪಾದನೆಯ ಅಟ್ಟಹಾಸ ಮೆರೆಯುತ್ತಿದ್ದಾರೆ.
ಹಾಗಾಗಿ ಅಮೆರಿಕ ಮುಂಬೈ ಮೇಲಿನ ದಾಳಿ ಕೇವಲ ಭಾರತದ ಸಮಸ್ಯೆ ಎಂದು ಪರಿಗಣಿಸದೇ, ತನ್ನದೇ ಸಮಸ್ಯೆ ಎಂಬ ನೆಲೆಯಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸುಮಾರು 20ವಿವಿಧ ಸಂಘಟನಗಳು ಘಟನೆ ಕುರಿತಂತೆ ಕ್ಯಾಪಿಟಲ್ ಹಿಲ್‌ನಲ್ಲಿ ಪ್ರತಿಭಟಿಸುವ ಮೂಲಕ ಅಮೆರಿಕವನ್ನು ಒತ್ತಾಯಿಸಿದ್ದಾರೆ.
ಇಂಡಿಯನ್ ಅಮೆರಿಕನ್ ಟಾಸ್ಕ್ ಫೋರ್ಸ್(ಐಎಟಿಎಫ್) ಹೆಸರಿನ ಬ್ಯಾನರ್ ಅಡಿಯಲ್ಲಿ ಒಗ್ಗೂಡಿರುವ ಅವರು, ಒಬಾಮ ನೇತೃತ್ವದ ಆಡಳಿತ, ಯವುದೇ ಪಕ್ಷಪಾತ ಎಸಗದೆ, ಮುಂಬೈ ದಾಳಿಯ ಕುರಿತಂತೆ ಪಾಕಿಸ್ತಾನ ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕಾಗಿದೆ. |