ಮುಂಬಯಿ ದಾಳಿಯ ಹಿನ್ನೆಲೆಯಲ್ಲಿ ಭಾರತದ ಬೇಡಿಕೆಗಳಿಗೆ ಜವಾಬ್ದಾರಿಯುತವಾಗಿ ಪ್ರತಿಸ್ಪಂದಿಸುವಂತೆ ಅಂತಾರಾಷ್ಟ್ರೀಯ ಒತ್ತಡಕ್ಕೆ ತುತ್ತಾಗಿರುವ ಪಾಕಿಸ್ತಾನವು ಮತ್ತೊಂದು ಸುಳ್ಳಿನ ಸರಪಣಿ ಬಿಚ್ಚಿಡಲು ತಯಾರಾಗಿದ್ದು, ತನಿಖೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ, ಬಂಧಿತ ಉಗ್ರಗಾಮಿ ಅಜ್ಮಲ್ ಅಮೀರ್ ಕಸಬ್ ಸತ್ತಿದ್ದಾನೆ ಎಂದು ಹೇಳಲು ಹೊರಟಿದೆ ಎಂಬುದನ್ನು ಮೂಲಗಳು ದೃಢಪಡಿಸಿವೆ.
ಭಾರತವು ನೀಡಿದ ಸಾಕ್ಷ್ಯಾಧಾರಗಳ ದೊಡ್ಡ ಹೊರೆಗೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಪಾಕಿಸ್ತಾನಿ ಏಜೆನ್ಸಿಗಳು ತಯಾರಿಸುವ ತನಿಖಾ ವರದಿಯಲ್ಲಿ, ಇದೀಗ ಭಾರತದ ವಶದಲ್ಲಿರುವ ಉಗ್ರಗಾಮಿ ಕಸಬ್, ವಾಸ್ತವವಾಗಿ ಸತ್ತಿದ್ದಾನೆ ಎಂಬ ಉಲ್ಲೇಖವಿರುವುದಾಗಿ ಮೂಲಗಳು ಹೇಳಿವೆ. ಅಲ್ಲಿನ ಕೆಲವು ಮಾಧ್ಯಮ ವರದಿಗಳ ಪ್ರಕಾರ, "ಮುಂಬಯಿ ದಾಳಿಯಲ್ಲಿ ಬಂಧನವಾದ ತಕ್ಷಣವೇ ಕಸಬ್‌ನನ್ನು ಕೊಲ್ಲಲಾಗಿದೆಯೇ ಅಥವಾ ಇತ್ತೀಚಿಗೆಷ್ಟೇ ಕೊಲ್ಲಲಾಯಿತೇ ಎಂಬುದು ಇನ್ನಷ್ಟೇ ದೃಢಪಡಿಸಬೇಕಿದೆ"!.
ಭಾರತವು ನಮಗೆ ಕಸಬ್‌ನದ್ದಾಗಲೀ ಅಥವಾ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿರುವ ಇತರ 9 ಮಂದಿ ಉಗ್ರರದ್ದಾಗಲೀ, ಡಿಎನ್ಎ ಸ್ಯಾಂಪಲ್ ಅನ್ನು ನಮಗೆ ಕೊಟ್ಟಿಲ್ಲ. ಈ ಕಾರಣಕ್ಕೆ ಬಹುಶಃ ಭಾರತವು ಆತನನ್ನು ಮುಗಿಸಿರಬಹುದು ಎಂದು ಅವುಗಳು ಹೇಳುತ್ತಿವೆ.
ಗುರುವಾರ ಕೂಡ ಪಾಕಿಸ್ತಾನವು ಮೂವರನ್ನು ಬಂಧಿಸಿ, ಅವರು ಭಾರತದ 'ರಾ' ಏಜೆಂಟರು, ಭಾರತದ ಪರವಾಗಿ ಗೂಢಚಾರಿಕೆಗೆ ಬಂದು ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದ್ದರು ಎಂದು ಆರೋಪಿಸಿತ್ತು. ಮಾತ್ರವಲ್ಲ, ಈ ಬಂಧಿತ 'ಉಗ್ರಗಾಮಿಗಳು' ಹಿಂದೆಯೂ ಹಲವಾರು ಸಲ ಪಾಕಿಸ್ತಾನದ ಗಡಿಯೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು, ಮುಂಬಯಿ ದಾಳಿಯ ಆರೋಪ ಹೊತ್ತಿರುವ ಜಮಾತ್ ಉದ್ ದಾವಾ ಸಂಘಟನೆಗೆ ಸಂಬಂಧಿಸಿದ 'ಮಹತ್ವದ ದಾಖಲೆ ಪತ್ರಗಳನ್ನು' ಸಂಗ್ರಹಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ಪಾಕ್ ಪೊಲೀಸರು ಹೇಳಿದ್ದರು.
ಅಷ್ಟು ಮಾತ್ರವಲ್ಲ, ಮುಂಬಯಿ ದಾಳಿಯ ಸಂಚನ್ನು ಪಾಕಿಸ್ತಾನದಲ್ಲಿ ನಡೆಸಲಾಗಿಲ್ಲ, ಅದೆಲ್ಲೋ ನಮ್ಮ ನೆಲದಿಂದ ಹೊರಗೆ ನಡೆದಿದ್ದಿರಬಹುದು ಎಂದೂ ಪಾಕಿಸ್ತಾನ ಸ್ಪಷ್ಟಪಡಿಸಿತ್ತು. ಇವೆಲ್ಲವೂ ಭಾರತವು ಒಪ್ಪಿಸಿರುವ ಸಾಕ್ಷ್ಯಾಧಾರಗಳಿಗೆ ಪ್ರತಿಯಾಗಿ, ತಾನೇ ತನಿಖೆ ನಡೆಸಿ ಭಾರತಕ್ಕೆ, ಮತ್ತು ವಿಶ್ವಕ್ಕೆ ಒಪ್ಪಿಸಲಿರುವ ಪಾಕಿಸ್ತಾನದ ಬಹುನಿರೀಕ್ಷಿತ 'ತನಿಖಾ ವರದಿಯಲ್ಲಿ' ಒಳಗೊಳ್ಳಲಿರುವ ಅಂಶಗಳು ಎಂಬ ವಿಷಯ ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿದೆ. ದಾವೋಸ್‌ನಲ್ಲಿರುವ ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಈಗಾಗಲೇ ಹೇಳಿಕೆ ನೀಡಿ "ಪಾಕಿಸ್ತಾನದ ಪ್ರತಿಕ್ರಿಯೆಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ" ಎಂದಿದ್ದರು. "ಏನಾದರೂ ಖಚಿತ ಮಾಹಿತಿಗಳಿದ್ದಲ್ಲಿ, ನಾವು ಖಂಡಿತವಾಗಿ ಅದನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುತ್ತೇವೆ" ಎಂದು ಗಿಲಾನಿ ಹೇಳಿದ್ದಾರೆ. |