ತಮಿಳು ಬಂಡುಕೋರರ ಪ್ರಾಬಲ್ಯವಿರುವ ಪ್ರದೇಶದಲ್ಲಿರುವ ತಮಿಳು ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಭಾರತದ ಮನವಿಗೆ ಸ್ಪಂದಿಸಿರುವ ಶ್ರೀಲಂಕಾ, ನಾಗರಿಕರು ಮುಕ್ತವಾಗಿ ಓಡಾಡಲು ಅನುಕೂಲವಾಗುವ ವಾತಾವರಣ ಕಲ್ಪಿಸಿಕೊಡುವಂತೆ ಎಲ್‌ಟಿಟಿಇಗೆ 48ಗಂಟೆಗಳ ಅಂತಿಮ ಗಡುವು ನೀಡಿರುವುದಾಗಿ ಅಧ್ಯಕ್ಷ ಮಹೀಂದ ರಾಜಪಕ್ಸೆ ಎಚ್ಚರಿಕೆ ನೀಡಿದ್ದಾರೆ.
ತಮಿಳುಬಂಡುಕೋರರ ನೆಲೆಯಲ್ಲಿನ ನಾಗರಿಕರು ಯಾವುದೇ ಭಯಾತಂಕಗಳಿಲ್ಲದೆ ಮುಕ್ತವಾಗಿ ಓಡಾಡುವ ಅವಕಾಶ ನೀಡುವಂತೆ ಎಲ್‌ಟಿಟಿಇಯನ್ನು ಆಗ್ರಹಿಸಿರುವ ರಾಜಪಕ್ಸೆ, ಅದಕ್ಕಾಗಿ 48ಗಂಟೆಗಳ ಅಂತಿಮ ಗಡುವು ನೀಡಿದ್ದಾರೆ. ಅಲ್ಲದೇ ನಾಗರಿಕರಿಗೆ ಯಾವುದೇ ರೀತಿಯ ಅಪಾಯವಾಗದಂತೆ ಸುರಕ್ಷಿತ ನೆಲೆ ಒದಗಿಸಲಾಗುವುದು ಎಂಬ ಭರವಸೆ ನೀಡುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.
ಘರ್ಷಣೆಯ ಸಂದರ್ಭದಲ್ಲಿ ತಮಿಳು ಬಂಡುಕೋರರು ನಾಗರಿಕರನ್ನೇ ಗುರಾಣಿಯನ್ನಾಗಿಸಿಕೊಂಡು, ಅವರನ್ನೇ ಬಲಿತೆಗೆದುಕೊಳ್ಳುತ್ತಿರುವ ಎಲ್‌ಟಿಟಿಇ ಕಾರ್ಯವೈಖರಿ ದುರದೃಷ್ಟಕರವಾದದ್ದು ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಈಗಲೂ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ ಸುಮಾರು 250,000ನಾಗರಿಕರು ಎಲ್‌ಟಿಟಿಇ ಹಿಡಿತದಲ್ಲಿಯೇ ಇದ್ದಿರುವುದಾಗಿ ರೆಡ್ ಕ್ರಾಸ್ ಅಂಕಿ-ಅಂಶ ತಿಳಿಸಿದೆ. ಎಲ್‌ಟಿಟಿಇ ಅಮಾಯಕರ ಪ್ರಾಣದ ಜತೆ ಚಲ್ಲಾಟವಾಡುತ್ತಿರುವ ಬಗ್ಗೆ ಮಾನವ ಹಕ್ಕು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. |