ಆರ್ಥಿಕ ಕುಸಿತದಿಂದ ತತ್ತರಿಸಿ ಹೋಗಿರುವ ಅಮೆರಿಕದ ಆರ್ಥ ವ್ಯವಸ್ಥೆ ಚೇತರಿಕೆ ನೀಡುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ಮಂಡಿಸಿದ್ದ ಸುಮಾರು 40ಲಕ್ಷ ಕೋಟಿ ರೂ.ಪರಿಹಾರ ಪ್ಯಾಕೇಜ್‌ಗೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಅನುಮೋದನೆ ನೀಡಿದೆ.
ಗುರುವಾರ ಮಂಡಿಸಲಾದ ಪರಿಹಾರ ಪ್ಯಾಕೇಜ್ ಮಸೂದೆ ಪರವಾಗಿ 244ಮತಗಳು ಬಿದ್ದರೆ, ವಿರೋಧವಾಗಿ 188ಮತಗಳು ಚಲಾವಣೆಯಾಗಿದ್ದವು. ಈ ಮೂಲಕ ಅಧ್ಯಕ್ಷ ಒಬಾಮ ಅವರಿಗೆ ಮೊದಲ ರಾಜಕೀಯ ಗೆಲುವು ದೊರೆತಂತಾಗಿದೆ.
ಮಸೂದೆ ಮಂಡನೆಗೂ ಮುನ್ನ ಅಮೆರಿಕದ ಪ್ರಮುಖ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದ ಒಬಾಮ ಮಸೂದೆ ಪರ ಮತಹಾಕುವಂತೆ ರಿಪಬ್ಲಿಕನ್ ಸಂಸದರ ಮೇಲೆ ಉದ್ಯಮಿಗಳಿಂದ ಒತ್ತಡ ಹೇರುವ ಯತ್ನ ನಡೆಸಿದ್ದರು. ಈ ಹಿಂದೆ ಬುಷ್ ಆಡಳಿತ ಕೂಡ ಸುಮಾರು 32 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಿಸಿತ್ತು. |