ಗ್ವಾಂಟೆನಾಮೋ ಬೇ ಮಿಲಿಟರಿ ನೆಲೆಯನ್ನು ಅಮೆರಿಕ ಕ್ಯೂಬಾಕ್ಕೆ ಹಸ್ತಾಂತರಿಸಬೇಕು ಎಂದು ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನೂತನ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಆಗ್ರಹಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಪಟ್ಟವೇರಿದ ಪ್ರಥಮ ಕಪ್ಪುವರ್ಣೀಯ ಬರಾಕ್ ಒಬಾಮ ಬಗ್ಗೆ ಕ್ಯಾಸ್ಟ್ರೋ ಅಭಿನಂದನೆ ಸಲ್ಲಿಸಿ, ಇನ್ನು ಮುಂದಾದರು ಅಮೆರಿಕದಲ್ಲಿ ಹೊಸ ಶಕೆ ಪ್ರಾರಂಭವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದೀಗ ಕೆಲವು ವಾರಗಳ ಬಳಿಕ, ಕ್ಯಾಸ್ಟ್ರೋ ಬರೆದಿರುವ ನೂತನ ಬರಹವನ್ನು ಕ್ಯೂಬಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದ್ದು, ಒಬಾಮ ಅವರು ತುಂಬಾ ಇಂಟೆಲಿಜೆಂಟ್ ಹಾಗೂ ನೋಬಲ್ ವ್ಯಕ್ತಿತ್ವ ಹೊಂದಿರುವವರು ಎಂದು ಬಣ್ಣಿಸಿರುವ ಅವರು, ಒಬಾಮ ನಿಲುವು ಮತ್ತಷ್ಟು ಗಟ್ಟಿಗೊಳ್ಳಬೇಕು ಎಂದಿದ್ದಾರೆ.
ಗ್ವಾಂಟೆನಾಮೋ ಬೇ ಮಿಲಿಟರಿ ಶಿಬಿರದ ನೆಲೆಯಲ್ಲಿ ಅಮೆರಿಕ ಕ್ಯೂಬಾಕ್ಕೆ ವಾಪಸು ನೀಡದಿದ್ದರೆ, ಅದು ಅಂತಾರಾಷ್ಟ್ರೀಯ ಕಾನೂನನ್ನು ಮುರಿದಂತೆ ಎಂದು 82ರ ಹರೆಯದ ಕ್ಯಾಸ್ಟ್ರೋ ಚುರುಕು ಮುಟ್ಟಿಸಿದ್ದಾರೆ.
ಆ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಒಬಾಮ ಯಾವುದೇ ಷರತ್ತುಗಳಿಲ್ಲದೆ ನಮ್ಮ ಬೇಡಿಕೆಯನ್ನು ಗೌರವಿಸಬೇಕು ಎಂಬುದಾಗಿಯೂ ಬರೆದಿದ್ದಾರೆ.
ಗ್ವಾಂಟೆನಾಮೋ ಬೇಯನ್ನು ಒಂದು ವರ್ಷದೊಳಗೆ ಮುಚ್ಚಲಾಗುವುದು ಎಂದು ಬರಾಕ್ ಹುಸೇನ್ ಒಬಾಮ ಘೋಷಿಸಿದ್ದ, ಈ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರವಾದ ಕ್ಯೂಬಾದ ಪಶ್ಚಿಮಭಾಗದಲ್ಲಿರುವ 45 ಸ್ಕ್ವಾರ್ ಮೈಲು ಉದ್ದದ ಗ್ವಾಂಟನಾಮೋವನ್ನು ತಮಗೆ ಹಸ್ತಾಂತರಿಸಬೇಕು ಎಂದು ಕ್ಯೂಬಾ ಆಗ್ರಹಿಸಿದೆ. |