ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಈಗಾಗಲೇ ಬಂಧಿಸಿರುವ ಶಂಕಿತ ಉಗ್ರರನ್ನೇ ಆರೋಪಿತರ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದಲ್ಲಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿಗಳು ತಿಳಿಸಿವೆ.
ವಾಣಿಜ್ಯ ನಗರಿ ದಾಳಿ ಬಗ್ಗೆ ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ತನಿಖೆಗೆ ಮುಂದಾದಾಗ, ಸುಮಾರು 124ಮಂದಿ ಶಂಕಿತ ಉಗ್ರರನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಪೂರ್ಣಗೊಂಡಿದೆ ಎಂದು ಪಾಕಿಸ್ತಾನದ ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಸಿಬಿಎಸ್‌ಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ತನಿಖೆಯ ಸಂದರ್ಭದಲ್ಲಿ ಉಗ್ರರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿರುವ ಅವರು, ಬಂಧಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೇ ಎಂಬ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿರುವುದಾಗಿ ವಿವರಿಸಿದೆ.
ತನಿಖೆಯನ್ನು ಕೈಗೊಂಡು ಬಂಧಿಸಲ್ಪಟ್ಟಿರುವ ಉಗ್ರರ ವಿರುದ್ಧ ಪಾಕಿಸ್ತಾನ ಮೊದಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದೇಶಿ ರಾಯಭಾರಿಯೊಬ್ಬರು ಸುದ್ದಿ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್ ಎ ತೊಯ್ಬಾ ಸಂಘಟನೆ ಶಾಮೀಲಾಗಿರುವುದಾಗಿ ಭಾರತ ಆರೋಪಿಸಿತ್ತು. ದಾಳಿಯ ಪ್ರಮುಖ ರೂವಾರಿ ಲಷ್ಕರ್ ಆಗಿದ್ದು, ಅದಕ್ಕೆ ಪೂರಕವಾದ ಎಲ್ಲಾ ಪುರಾವೆಗಳನ್ನು ಪಾಕಿಸ್ತಾನಕ್ಕೆ ನೀಡಿತ್ತು. ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬುದಾಗಿಯೂ ಕೇಳಿತ್ತು.
ಪ್ರಾಥಮಿಕ ವರದಿಯ ಪ್ರಕಾರ, ಮುಂಬೈ ದಾಳಿಯ ಸಂಚನ್ನು ಪಾಕ್ ನೆಲದಲ್ಲಿ ರೂಪಿಸಿದ್ದಲ್ಲ ಎಂದು ಪಾಕ್ ಮಾಧ್ಯಮ ವರದಿಗಳು ತಿಳಿಸಿವೆ. ವಿಶ್ವಸಂಸ್ಥೆ ಕೂಡ ಲಷ್ಕರ್‌ನ ಅಂಗಸಂಸ್ಥೆಯಾದ ಜಮಾದ್ ಉದ್ ದವಾ ಮೇಲೆ ನಿಷೇಧ ಹೇರಿದ ಮೇಲೆ, ಪಾಕಿಸ್ತಾನ ಕೂಡ ನಿಷೇಧ ಹೇರುವ ಮೂಲಕ ಅದರ ಪ್ರಮುಖ ಕಚೇರಿಗೆ ಬೀಗಮುದ್ರೆ ಹಾಕಿತ್ತು. |