ಜಗತ್ತಿನಲ್ಲಿ ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಅಮೆರಿಕದ ವಿದೇಶಾಂಗ ಮಾಜಿ ಕಾರ್ಯದರ್ಶಿ ಮೆಡ್ಲೈನ್ ಅಲ್‌ಬ್ರೈಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಆ ದೇಶ ಒಂದು ವೇಳೆ ಉಗ್ರರ ಕೈಗೊಪ್ಪಿಸಿದರೆ ಅದೊಂದು ಅಂತಾರಾಷ್ಟ್ರೀಯವಾಗಿಯೂ ದೊಡ್ಡ ತಲೆವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆ ದೇಶದಲ್ಲಿ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳಿವೆ, ಭಯೋತ್ಪಾದನೆ, ಬಡತನ, ಭ್ರಷ್ಟಾಚಾರದಿಂದ ತುಂಬಿದ್ದು, ಅದೊಂದು ತುಂಬಾ ಅಪಾಯಕಾರಿ ಸ್ಥಳವಾಗಿದೆ ಎಂದು ಹೇಳಿದರು.
ಅವರು ಅಮೆರಿಕ ಮತ್ತು ಮುಸ್ಲಿಮ್ ರಾಷ್ಟ್ರಗಳ ನಡುವಿನ ಸಂಬಂಧಗಳ ಕುರಿತು ನಡೆದ ಚರ್ಚಾಗೋಷ್ಠಿಯೊಂದರಲ್ಲಿ ಭಾಗವಹಿಸಿ ಮಾತನಾಡಿದರು. ಈ ಚರ್ಚೆಯನ್ನು ಪ್ರತಿಷ್ಠಿತ ವಿದೇಶಿ ವ್ಯವಹಾರ ಸಂಬಂಧಗಳ ಕೌನ್ಸಿಲ್ ಏರ್ಪಡಿಸಿತ್ತು.
ಬಿಲ್ ಕ್ಲಿಂಟನ್ ಆಡಳಿತಾವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅಲ್‌ಬ್ರೈಟ್, ನೂತನ ಅಧ್ಯಕ್ಷ ಬರಾಕ್ ಒಬಾಮ ಅವರ ಆಯ್ಕೆಯನ್ನು ಸ್ವಾಗತಿಸಿದ್ದಾರೆ.
ಅಲ್ಲದೇ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದುವ ನಿಟ್ಟಿನಲ್ಲಿ ಮುಂದುವರಿಯುತ್ತಿರುವ ಅವರನ್ನು ಶ್ಲಾಘಿಸುವುದಾಗಿಯೂ ಹೇಳಿದರು. |