ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ದೇಶದ ಸ್ಥಿತಿಗತಿ ವಿರುದ್ಧ ತಿರುಗಿ ಬಿದ್ದಿರುವ ಸಾವಿರಾರು ಜನರು ಆಡಳಿತಾರೂಢ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ರಷ್ಯಾದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಕೇಂದ್ರ ಭಾಗವಾದ ವ್ಲಾಡಿವೋಸ್ಟೊಕ್ ಮುಂಭಾಗದಲ್ಲಿ ಕಮ್ಯೂನಿಷ್ಟ್ ಪಕ್ಷದ ಸುಮಾರು 3ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಸಾರ್ವಜನಿಕರು,ಕೆಲವು ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು ಬೆಂಬಲ ನೀಡಿರುವುದಾಗಿ ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷದ ಅಂದಾಜು 5ಸಾವಿರ ಬೆಂಬಲಿಗರು ಕೂಡ ಪ್ರಧಾನಿ ವ್ಲಾಡಿಮೀರ್ ಪುಟಿನ್ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿರುವುದಾಗಿ ಸಂಘಟಕರು ಹೇಳಿದ್ದಾರೆ.
ಕಳೆದ ತಿಂಗಳು ಕೂಡ ಸರ್ಕಾರದ ಧೋರಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಪ್ರತಿಭಟನಾ ನಿರತರು ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿ, ಆಡಳಿತಾರೂಢರು ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. |