ಕ್ವೆಟ್ಟಾ : ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರದ ಕಚೇರಿಯಲ್ಲಿ, ಪ್ರಾದೇಶಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯನ್ನು ಬಂದೂಕುಧಾರಿ ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವಸಂಸ್ಥೆ ಕಚೇರಿಯ ಅಧಿಕಾರಿ ಕೆಲಸಕ್ಕೆ ವಾಹನದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ, ಪಾಕ್ ಮೂಲದ ಚಾಲಕನನ್ನು ಗಾಯಗೊಳಿಸಿ ಅಧಿಕಾರಿಯನ್ನು ಅಪಹರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಖಾಲೀದ್ ಮಸೂದ್ ತಿಳಿಸಿದ್ದಾರೆ.
ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ಬಲುಚಿಸ್ತಾನ್ ಪ್ರಾಂತ್ಯ, ಹೆಚ್ಚಿನ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದು, ಹೋರಾಟಗಾರರು ಅಧಿಕಾರಿಯನ್ನು ಅಪಹರಿಸಿರಬಹುದು ಎಂದು ಪೊಲೀಸರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಅಪಹೃತರಾದ ಅಧಿಕಾರಿಯನ್ನು ಯಾವ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎನ್ನುವ ಕುರಿತಂತೆ ಇಲ್ಲಿಯವರೆಗೆ ಮಾಹಿತಿ ಲಭಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ |