ಮಣಿಪಾಲ್ ಗ್ರೂಪ್ ಹಾಗೂ ನೇಪಾಳ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿರುವ ಮಣಿಪಾಲ್ ಟೀಚಿಂಗ್ ಹಾಸ್ಪಿಟಲ್‌ನ್ನು ಮಾವೋ ಬೆಂಬಲಿತ ಸಂಘಟನೆಗಳು ಬಂದ್ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಫೋಕ್ರಾ ನಗರದಲ್ಲಿ ಮಣಿಪಾಲ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸೆಸ್‌ನ ಅಡಿಯಲ್ಲಿ ಆಸ್ಪತ್ರೆಯನ್ನು ನಡೆಸಲಾಗುತ್ತಿದ್ದು,ಸಂಘಟನೆಗಳ ಒತ್ತಾಯದಿಂದಾಗಿ ತುರ್ತುಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ರೋಗಿಗಳಿಗೆ ತೊಂದರೆಯಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವೇತನ ಏರಿಕೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ನೇಪಾಳ ಆರೋಗ್ಯ ಕಾರ್ಮಿಕರ ಸಂಘ ಹಾಗೂ ಬೋಧಕೇತರ ಸಿಬ್ಬಂದಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
ವೇತನದಲ್ಲಿ 2 ಸಾವಿರ ರೂಪಾಯಿ ಏರಿಕೆ ಬೇಡಿಕೆ ಸೇರಿದಂತೆ ವರ್ಷದಲ್ಲಿ 240 ದಿನಗಳವರೆಗೆ ಕಾರ್ಯನಿರ್ವಹಿಸಿದ ಸಿಬ್ಬಂದಿಗಳನ್ನು ಖಾಯಂ ಮಾಡಿಕೊಳ್ಳಬೇಕೆಂದು ಸಂಘಟನೆಗಳು ಒತ್ತಾಯಿಸಿವೆ.ಆದರೆ ಆಸ್ಪತ್ರೆಯ ಅಡಳಿತ ಮಂಡಳಿ 1500 ರೂಪಾಯಿಗಳವರೆಗೆ ಏರಿಕೆ ಮಾಡುವುದಾಗಿ ಅಶ್ವಾಸನೆ ನೀಡಿದೆ. |