ತಮಿಳು ಉಗ್ರರ ವಶದಲ್ಲಿದ್ದ ಶೇ.90 ರಷ್ಟು ಪ್ರದೇಶವನ್ನು ವಶಪಡಿಸಿಕೊಂಡ ಶ್ರೀಲಂಕಾ ಸೇನಾಪಡೆಗಳು, ತಮಿಳು ಉಗ್ರರ ವೈಮಾನಿಕ ನೆಲೆಯನ್ನು ಕಂಡುಹಿಡಿಯುವಲ್ಲಿ ವಿಫಲವಾಗಿದ್ದು, ಸ್ವಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಉಗ್ರರು ವೈಮಾನಿಕ ದಾಳಿ ನಡೆಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ವಾಯುಪಡೆಯನ್ನು ಕಟ್ಟೆಚ್ಚರದಲ್ಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀಲಂಕಾದ ಸೇನಾಪಡೆಗಳು ತಮಿಳು ಉಗ್ರರ ಕೆಲ ವೈಮಾನಿಕ ನೆಲೆಗಳನ್ನು ವಶಕ್ಕೆ ತೆಗೆದುಕೊಂಡರೂ ಇತರ ನೆಲೆಗಳಿಂದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ದಾಳಿ ನಡೆಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಭೂದಳ ಹಾಗೂ ವಾಯುದಳವನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಸೇನಾಮೂಲಗಳು ತಿಳಿಸಿವೆ.
ತಮಿಳು ಉಗ್ರರ 10 ವಿಮಾನ ನೆಲೆಗಳಲ್ಲಿ ಆರು ನೆಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ನಾಲ್ಕು ವೈಮಾನಿಕ ನೆಲೆಗಳಿಂದ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೋರಾಟ ಮಾಡು ಇಲ್ಲವೆ ಮಡಿ ಎನ್ನುವ ಅಂತಿಮ ಘಟ್ಟದ ಹಂತವನ್ನು ತಲುಪಿರುವ ತಮಿಳು ಉಗ್ರರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಂತಹ ದಾಳಿ ನಡೆಸಲು ಕೂಡಾ ಸಿದ್ದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ವಾತಂತ್ರೋತ್ಸವ ದಿನಾಚರಣೆಯಂದು ತಮಿಳು ಉಗ್ರರ ದಾಳಿಯನ್ನು ತಡೆಗಟ್ಟಲು ವಾಯುಪಡೆಯನ್ನು ಕಟ್ಟೆಚ್ಚರ ಸ್ಥಿತಿಯಲ್ಲಿಡಲಾಗಿದೆ ಎಂದು ವಾಯುಪಡೆ ವಕ್ತಾರ ಜನಕಾ ನನಯಕ್ಕರಾ ಹೇಳಿದ್ದಾರೆ. |