ಮುಂಬೈ ಭಯೋತ್ಪಾದನಾ ದಾಳಿ ಜತೆ ಸಂಬಂಧ ಇದ್ದರೆನ್ನಲಾದ 120 ಮಂದಿಯನ್ನು ಪಾಕಿಸ್ತಾನ ಸರಕಾರ 'ಶಿಕ್ಷೆಗೆ' ಗುರಿಪಡಿಸಲಿದೆ. ಆದರೆ, ಮುಂಬಯಿ ದಾಳಿಗೆ ಕಾರಣರು ಎಂದು ಭಾರತವು ಆರೋಪಿಸುತ್ತಲೇ ಬಂದಿರುವ ಪ್ರಮುಖ ಉಗ್ರಗಾಮಿ ಸಂಘಟನೆಗಳಲ್ಲಿ 'ಕೆಲವರ' ಹೆಸರೂ ಈ ಪಟ್ಟಿಯಲ್ಲಿ ಇರಬಹುದು ಎನ್ನುತ್ತದೆ ಪಾಕ್ ಮಾಧ್ಯಮ ವರದಿಯೊಂದು.
ಒಂದೊಮ್ಮೆ ದೇಶದ ಕುಖ್ಯಾತ ಬೇಹುಗಾರಿಕಾ ಏಜೆನ್ಸಿ, ಪ್ರಬಲವಾಗಿರುವ ಐಎಸ್ಐ ಬೆಂಬಲಿಸಿದ್ದೇ ಆದರೆ, ಪಾಕಿಸ್ತಾನ ಸರಕಾರವು ಉಗ್ರಗಾಮಿಗಳನ್ನು ಶಿಕ್ಷೆಗೆ ಗುರಿಪಡಿಸುವುದು ಇದೇ ಮೊದಲ ಹೆಜ್ಜೆಯಾಗಲಿದೆ. ಭಾರತವು ತೀವ್ರವಾಗಿ ಒತ್ತಾಯಿಸುತ್ತಿರುವ ಉಗ್ರಗಾಮಿಗಳ ಹೆಸರು ಈ ಪಟ್ಟಿಯಲ್ಲಿ ಇಲ್ಲದಿರುವುದು 'ಪಾಕಿಸ್ತಾನವು ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ'ದ ಅಂಗ ಎಂದು ಎಬಿಸಿ ನ್ಯೂಸ್ ಹಿರಿಯ ಬೇಹುಗಾರಿಕಾ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
'ಮುಂಬಯಿ ದಾಳಿ ಆರಂಭವಾಗುತ್ತಿದ್ದಂತೆಯೇ ಭಾರತದೊಂದಿಗೆ ಯಾವುದೇ ರೀತಿಯ ಶಂಕಾಸ್ಪದ ಸಂಪರ್ಕ' ಹೊಂದಿದವರೂ ಈ ಪಟ್ಟಿಯಲ್ಲಿದ್ದಾರೆ. ಮತ್ತು ಅವರ ಮೇಲೆ ಪಾಕಿಸ್ತಾನದ ಸೈಬರ್ ಅಪರಾಧ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಕಾರಣವೆಂದರೆ, ಶಂಕಿತರು ಸಂವಹನಕ್ಕಾಗಿ ಇಂಟರ್ನೆಟ್ ಫೋನ್ ಬಳಸಿದ್ದರು ಎಂದು ಈ ಅಧಿಕಾರಿ ತಿಳಿಸಿದ್ದಾರೆ.
ಈ ರೀತಿ ಮಾಡುವ ಮೂಲಕ ಪಾಕ್ ಸರಕಾರವು, ಅಂತಾರಾಷ್ಟ್ರೀಯ ಸಮುದಾಯದ ಆಕ್ರೋಶವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ. ಅಂತೆಯೇ ತಾವು ಉಗ್ರರ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಜಗತ್ತಿಗೆ ತೋರಿಸಿಕೊಟ್ಟಂತೆಯೂ ಆಗುತ್ತದೆ. |