ಶ್ರೀಲಂಕಾದ ಉತ್ತರಭಾಗದ ಯುದ್ಧಪೀಡಿತ ಪ್ರದೇಶದಲ್ಲಿ ಕೊಟ್ಟ ಕೊನೆಯದಾಗಿ ಉಳಿದುಕೊಂಡಿದ್ದ ಆಸ್ಪತ್ರೆ ಮೇಲೆ ಕ್ಲಸ್ಟರ್ ಬಾಂಬುಗಳನ್ನು (ಬಾಂಬ್ ಗುಚ್ಛ) ಹಾಕಲಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿರುವಂತೆಯೇ, ಮಂಗಳವಾರ ಸರಕಾರದ "ಸುರಕ್ಷಿತ-ವಲಯ"ದ ಒಳಗೆ ಮತ್ತು ಹೊರಗೆ ನಡೆದ ಹೋರಾಟದಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ 54ಕ್ಕೇರಿದೆ ಎಂದು ಮೂಲಗಳು ತಿಳಿಸಿವೆ.
ವಾನ್ನಿ ಪ್ರದೇಶದ ಆಸ್ಪತ್ರೆ ಮೇಲೆ ಬಾಂಬ್ ಗುಚ್ಛಗಳನ್ನು ಎಸೆಯಲಾಗಿದೆ ಎಂದು ವಿಶ್ವಸಂಸ್ಥೆ ವಕ್ತಾರ ಗೋರ್ಡನ್ ವೆಯ್ಸ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಿಬ್ಬಂದಿ ಮತ್ತವರ ಕುಟುಂಬ ವರ್ಗದವರಿಗೂ ಅಪಾಯವಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
2006ರ ಕದನವಿರಾಮ ಒಪ್ಪಂದ ಮುರಿದುಬಿದ್ದ ಬಳಿಕ, ಎಲ್ಟಿಟಿಇಯನ್ನು ಸೋಲಿಸಲು ಪಣತೊಟ್ಟಿರುವ ಸರಕಾರದ ಪ್ರಯತ್ನದಲ್ಲಿ ಮೊದಲ ಬಾರಿಗೆ ಕ್ಲಸ್ಟರ್ ಬಾಂಬ್ ದಾಳಿ ನಡೆಸಲಾಗಿದೆ. ತಮ್ಮ ಪ್ರದೇಶದ ಎಲ್ಲ ಪ್ರಮುಖ ಪಟ್ಟಣಗಳು ಹಾಗೂ ಗ್ರಾಮಗಳಿಂದ ತೆರವುಗೊಂಡಿರುವ ಎಲ್ಟಿಟಿಇ ವ್ಯಾಘ್ರಪಡೆ ಸದಸ್ಯರು, ಸಣ್ಣ ಕಾಡಿನ ಪ್ರದೇಶದ ಮೇಲೆ ಮಾತ್ರವೇ ಹಿಡಿತ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಸುರಕ್ಷಿತ ವಲಯದಲ್ಲಿ ಬಾಂಬ್ ಹಾಕಬಾರದು ಎಂದು ಸರಕಾರ ಹೇಳಿದ್ದರೂ, ಅಲ್ಲಿಗೆ ನಡೆದ ದಾಳಿಯಲ್ಲಿ 52 ಮಂದಿ ನಾಗರಿಕರು ಸಾವನ್ನಪ್ಪಿದ್ದು, 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭಾನುವಾರ ವ್ಯಾಘ್ರದಳದ ನಿಯಂತ್ರಣದಲ್ಲಿದ್ದ ಪುದುಕುಡಿಯ್ಯಿರುಪ್ಪುವಿನ ಪೌರ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದ್ದು, 12 ಮಂದಿ ಹತರಾಗಿದ್ದರು. |