ದ್ವೀಪರಾಷ್ಟ್ರವಾದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಹಾಗೂ ರೌಲ್ ಕ್ಯಾಸ್ಟ್ರೋ ಅವರ ಜನ್ಮಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಫಿಡೆಲ್ ಅವರು ಬಾಲ್ಯವನ್ನು ಕಳೆದ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವ ನಿಟ್ಟಿನಲ್ಲಿ ಪೂರ್ವದ ಹೂಲ್‌ಗಿನ್ ಪ್ರದೇಶದ ಸುಮಾರು 32,100ಎಕರೆ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ.
ಏಂಜೆಲ್ ಕ್ಯಾಸ್ಟ್ರೋ ಹಾಗೂ ಲಿನಾ ರೌಜ್ ದಂಪತಿಗಳ ಪುತ್ರರಾಗಿರುವ ಫಿಡೆಲ್ ಮತ್ತು ರೌಲ್ ಇಬ್ಬರು ಕ್ರಾಂತಿಕಾರಿ ಹೋರಾಟಗಾರರೇ ಆಗಿದ್ದಾರೆ.
1959ರಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಕ್ಯೂಬಾದ ಅಧಿಕಾರದ ಗದ್ದುಗೆ ಏರಿದ ಫಿಡೆಲ್ ಕ್ಯಾಸ್ಟ್ರೋ, ಅಮೆರಿಕಕ್ಕೆ ಸಿಂಹಸ್ವಪ್ನರಾಗುವ ಮೂಲಕ ದೀರ್ಘಕಾಲ ಆಡಳಿತ ನಡೆಸಿದ ಕೀರ್ತಿಗೆ ಭಾಜನರಾಗಿದ್ದರು. ಇದೀಗ ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು, ಅಧ್ಯಕ್ಷಗಾದಿಯನ್ನು ಸಹೋದರ ರೌಲ್ ಕ್ಯಾಸ್ಟ್ರೋಗೆ ವಹಿಸಿದ್ದರು.
ಒಟ್ಟು 80ಎಕರೆ ಸ್ಥಳದಲ್ಲಿ 11ಕಟ್ಟಡಗಳು, ಮ್ಯೂಸಿಯಂ ಸೇರಿದಂತೆ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ರಾಷ್ಟ್ರೀಯ ಸ್ಮಾರಕ ಕಮಿಷನ್ ವಿಶೇಷ ತಂತ್ರಜ್ಞ ಪ್ರೆಯಾ ಮಟೋಸ್ ವಿವರಿಸಿದ್ದಾರೆ. |