ಅಲ್ ಖಾಯಿದಾ ಮತ್ತು ತಾಲಿಬಾನ್ ಜತೆ ತನಗೆ ಯಾವುದೇ ಸಂಪರ್ಕವಿಲ್ಲ ಮತ್ತು ಭದ್ರತಾ ಮಂಡಳಿ ಹೇರಿರುವ ನಿರ್ಬಂಧಗಳು 'ಅನ್ಯಾಯ' ಎಂದು ಮುಂಬಯಿ ದಾಳಿಯಲ್ಲಿ ಪ್ರಧಾನ ಆರೋಪಿಯಾಗಿರುವ ಲಷ್ಕರ್ ಇ ತೋಯ್ಬಾ ಎಂಬ ಭಯೋತ್ಪಾದಕ ಸಂಘಟನೆಯ ಅಂಗ ಸಂಸ್ಥೆ ಜಮಾತ್ ಉದ್ ದಾವಾ (ಜೆಯುಡಿ) ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಹೇಳಿದೆ.
ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಜೆಯುಡಿ ಮುಖ್ಯಸ್ಥ ಹಫೀಜ್ ಮೊಹಮದ್ ಸಯೀದ್ ಡಿಸೆಂಬರ್ 26ರಂದೇ ಪತ್ರ ಬರೆದಿದ್ದರೂ, ಈ ಪತ್ರವನ್ನು ಕಳೆದ ಕೆಲವು ದಿನಗಳಿಂದ ಪತ್ರಕರ್ತರ ವಲಯದಲ್ಲಿ ಹಂಚಲಾಗುತ್ತಿದೆ.
ಪಾಕಿಸ್ತಾನಕ್ಕೆ ಒಂದು ದಿನದ ಭೇಟಿಗಾಗಿ ಮೂನ್ ಅವರು ಬುಧವಾರ ಪಾಕಿಸ್ತಾನಕ್ಕೆ ಬಂದಿದ್ದರು. ಈ ಸಂದರ್ಭ, ಮುಂಬಯಿ ದಾಳಿಗೆ ಸಂಬಂಧಿಸಿ ಭಾರತಕ್ಕೆ ಸಂಪೂರ್ಣ ರೀತಿಯ ಸಹಕಾರ ನೀಡುವಂತೆ ಅವರು ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದರು.
ಜಮಾತ್ ಮತ್ತು ಅದರ ಮುಖಂಡರ ಮೇಲೆ ವಿಶ್ವಸಂಸ್ಥೆ ಹೇರಿರುವ ನಿರ್ಬಂಧವು ಪಾಕಿಸ್ತಾನದ ಮತ್ತು ಜಮ್ಮ ಸಂಘಟನೆಯ 'ಕಲ್ಯಾಣ ಚಟುವಟಿಕೆಗಳಿಂದ' ಲಾಭ ಪಡೆಯುತ್ತಿದ್ದ ಜನತೆಯ ಹಿತಾಸಕ್ತಿಗಳಿಗೆ ಬಾಧಕವಾಗಿದೆ ಎಂದು ಸಯೀದ್ ಪತ್ರದಲ್ಲಿ ತಿಳಿಸಿದ್ದಾನೆ.
ತನಗೂ ಮುಂಬಯಿ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದೂ ಸಯೀದ್ ಹೇಳಿದ್ದು, ತನ್ನನ್ನು ಸಮರ್ಥಿಸಿಕೊಳ್ಳುವ ಯಾವುದೇ ಅವಕಾಶಗಳನ್ನು ನೀಡದೆ ವಿಶ್ವಸಂಸ್ಥೆಯು ಜಮಾತನ್ನು ನಿಷೇಧಿಸಿದೆ ಎಂದು ಹೇಳಿದ್ದಾನೆ. |