ದಕ್ಷಿಣ ಏಷ್ಯಾದಲ್ಲಿ ಕಾಶ್ಮೀರ ವಿವಾದ ಪ್ರಮುಖ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂಬೈ ದಾಳಿ ಕುರಿತು ಪಾಕಿಸ್ತಾನ ನಡೆಸಿದ ತನಿಖೆ ತೃಪ್ತಿ ತಂದಿರುವುದಾಗಿ ತಿಳಿಸಿದ್ದಾರೆಂದು ಜಿಯೋ ಟಿವಿ ವರದಿ ಹೇಳಿದೆ.
ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಹಾಗೂ ಮೂನ್ ಅವರು ಜಿಂಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮುಂಬೈ ದಾಳಿಯ ತನಿಖೆಗೆ ಪಾಕಿಸ್ತಾನ ಪೂರ್ಣ ಸಹಕಾರ ನೀಡಬೇಕು ಎಂಬುದಾಗಿ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಅಲ್ಲದೇ ದಕ್ಷಿಣ ಏಷ್ಯಾದಲ್ಲಿಯೇ ಕಾಶ್ಮೀರ ವಿಷಯ ತುಂಬಾ ಗಂಭೀರವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೂನ್, ಭಯೋತ್ಪಾದನೆ ವಿರುದ್ಧ ಪಾಕ್ ಹೋರಾಟವನ್ನು ಶ್ಲಾಘಿಸಿರುವುದಾಗಿ ವರದಿ ತಿಳಿಸಿದೆ.
ಭಯೋತ್ಪಾದನೆ ವಿರುದ್ದ ಪಾಕಿಸ್ತಾನ ಹೋರಾಡಲಿದ್ದು, ದೇಶದ ಹೊರಭಾಗದಲ್ಲೂ ಅಪರಾಧ ಚಟುವಟಿಕೆ ನಡೆಸುವ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯವನ್ನು ದೊರಕಿಸಿಕೊಡುವುದಾಗಿ ಗಿಲಾನಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆಂದು ವರದಿ ಹೇಳಿದೆ. |