ಲಾಹೋರ್‌ನ ಹೋಟೆಲ್‌ವೊಂದರಲ್ಲಿ ತಂಗಿದ್ದ ಭಾರತದ ಇಬ್ಬರು ಮಾಧ್ಯಮ ಪತ್ರಕರ್ತರನ್ನು ಅನಾಮಿಕ ವ್ಯಕ್ತಿಗಳು ಥಳಿಸಿರುವ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ 'ನ್ಯೂಸ್ ಎಕ್ಸ್' ಟಿವಿ ಚಾನೆಲ್‌ನ ಇಬ್ಬರು ಪತ್ರಕರ್ತರನ್ನು ಪಾಕಿಸ್ತಾನದಲ್ಲಿ ಥಳಿಸಿರುವ ಪ್ರಕರಣದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಭಾರತ, ಇದೊಂದು ದುರದೃಷ್ಟಕರವಾಗಿದೆ. ಈಗಾಗಲೇ ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ನಡುವೆ ಇಂತಹ ಘಟನೆ ನಡೆದಿರುವ ಬಗ್ಗೆ ಖೇದ ವ್ಯಕ್ತಪಡಿಸಿದೆ.
ನ್ಯೂಸ್ ಎಕ್ಸ್‌ನ ಜುಜ್‌ಹರ್ ಸಿಂಗ್ ಹಾಗೂ ಫೋಟೋಗ್ರಾಫರ್ ತಿಲಕ್ ರಾಜ್ ಎಂಬಿಬ್ಬರಿಗೆ ಅನಾಮಿಕ ವ್ಯಕ್ತಿಗಳು ಥಳಿಸುತ್ತಿರುವಾಗಲೇ, ಯಾವುದೇ ಗಂಭೀರ ಗಾಯವಾಗದೆ ಅಪಾಯದಿಂದ ತಪ್ಪಿಸಿಕೊಂಡಿದ್ದರು. ಆದರೆ ಅವರ ಕ್ಯಾಮೆರಾಗಳನ್ನು ಕಸಿದುಕೊಳ್ಳಲಾಗಿತ್ತು.
ಹರಸಾಹಸ ಮಾಡಿ ಅಲ್ಲಿಂದ ತಪ್ಪಿಸಿಕೊಂಡ ಪತ್ರಕರ್ತರು ತಮ್ಮ ವಾಹನದಲ್ಲಿ ಭಾರತದ ರಾಯಭಾರಿ ಕಚೇರಿಗೆ ಆಗಮಿಸಿ, ಇಸ್ಲಾಮಾಬಾದ್ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಕಳೆದ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದನಾ ದಾಳಿ ನಡೆದ ನಂತರ ಭಾರತದಿಂದ ಯಾವುದೇ ವ್ಯಕ್ತಿಗಳು ಪಾಕಿಸ್ತಾನಕ್ಕೆ ಪ್ರಯಾಣಿಸಬಾರದು ಎಂದು ಭಾರತ ಮನವಿ ಮಾಡಿಕೊಂಡಿತ್ತು. ಆ ನಿಟ್ಟಿನಲ್ಲಿ ಭಾರತದ ಯಾವುದೇ ಪ್ರಜೆ ಪಾಕ್‌ಗೆ ಪ್ರಯಾಣ ಬೆಳೆಸುವುದು ಸುರಕ್ಷಿತವಲ್ಲ ಎಂದು ಮತ್ತೊಮ್ಮೆ ಸಲಹೆ ನೀಡಿದೆ. |