ಅಮೆರಿಕವನ್ನು ಗುರಿಯಾಗಿರಿಸಿಕೊಂಡು ಅಲ್ ಖಾಯಿದ ಉಗ್ರಗಾಮಿ ಸಂಘಟನೆಯು ಯೆಮೆನ್‌ನಲ್ಲಿ ಪ್ರಬಲವಾದ ನೆಲೆ ಸ್ಥಾಪಿಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಅಲ್ ಖಾಯಿದವನ್ನು 'ಬೆಳೆಯುತ್ತಿರುವ ಸವಾಲು' ಎಂದು ಅಮೆರಿಕ ಬಣ್ಣಿಸಿದೆ.
ಯೆಮೆನ್ ಕುರಿತ ವರದಿ ಬಗ್ಗೆ ಪೂರ್ಣವಾಗಿ ಉಲ್ಲೇಖಿಸದೆ ಹೇಳಿಕೆ ನೀಡಿದ ಅಮೆರಿಕ ರಾಜ್ಯಾಂಗ ಇಲಾಖೆ ವಕ್ತಾರ ರಾಬರ್ಟ್ ವುಡ್, ಅಲ್ ಖಾಯಿದಾ ಬೆದರಿಕೆಯನ್ನು ನಿರ್ನಾಮಗೊಳಿಸಲು ವಿಶ್ವಾದ್ಯಂತ ಪಾಲುದಾರರೊಂದಿಗೆ ಅಮೆರಿಕವು ಗಂಭೀರ ಪ್ರಯತ್ನದಲ್ಲಿದೆ ಎಂದರು.
'ಅದು ಅಷ್ಟು ಸುಲಭವೂ ಅಲ್ಲ. ಇದು ಅಮೆರಿಕಕ್ಕೆ ತಲೆನೋವಾಗಿರುವ ವಿಚಾರ' ಎಂದು ಹೇಳಿದ ವುಡ್, ಈ ಸವಾಲನ್ನು ಎದುರಿಸುವುದರ ಹೊರತು ಪರ್ಯಾಯ ಮಾರ್ಗಗಳಿಲ್ಲ ಎಂಬ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮಾತನ್ನು ಉಲ್ಲೇಖಿಸಿದರು.
ಈ ಬೆದರಿಕೆಯನ್ನು ನಿರ್ಮೂಲಗೊಳಿಸಲು ನಮ್ಮ ಜಾಗತಿಕ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದ ಅವರು, ಯೆಮೆನ್‌ನಲ್ಲಿ ಮಾತ್ರವೇ ಅಲ್ಲ, ಜಗತ್ತಿನ ಇತರ ಹಲವಾರು ಕಡೆಗಳಲ್ಲಿಯೂ ಅಲ್ ಖಾಯಿದಾ ಚಟುವಟಿಕೆ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಲೇ ಇದೆ ಎಂದು ಹೇಳಿದರು. |