ಪಾಕಿಸ್ತಾನದ ಕಳಂಕಿತ ನ್ಯೂಕ್ಲಿಯರ್ ವಿಜ್ಞಾನಿ ಅಬ್ದುಲ್ ಖಾದೀರ್ ಖಾನ್ ಅವರು ಸ್ವತಂತ್ರ ಪ್ರಜೆ ಅಲ್ಲದೇ ಗೃಹಬಂಧನದಿಂದಲೂ ಅವರನ್ನು ಮುಕ್ತಗೊಳಿಸಿರುವುದಾಗಿ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಘೋಷಿಸಿರುವುದಾಗಿ ಪಾಕ್ ಮಾಧ್ಯಮಗಳ ವರದಿ ತಿಳಿಸಿದೆ.
ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಮಾಜಿ ಮುಖ್ಯಸ್ಥ ಅಬ್ದುಲ್ ಖಾದೀರ್ ಖಾನ್ (72ವ) ಅವರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಸರ್ದಾರ್ ಮುಹಮ್ಮದ್ ಅಸ್ಲಾಮ್ ಅವರು ಖಾನ್ ಮುಕ್ತ ಓಡಾಟದ ತೀರ್ಪನ್ನು ನೀಡಿರುವುದಾಗಿ ವರದಿ ವಿವರಿಸಿದೆ.
ಅಲ್ಲದೇ ಎ.ಕ್ಯೂ.ಖಾನ್ ಅವರಿಗೆ ಸರ್ಕಾರ ವಿಐಪಿ ಪ್ರೋಟೋಕಾಲ್ ಪ್ರಕಾರ ಬಿಗಿ ಭದ್ರತೆಯನ್ನೂ ನೀಡಬೇಕೆಂದು ನ್ಯಾಯಪೀಠ ಈ ಸಂದರ್ಭದಲ್ಲಿ ಸೂಚನೆ ನೀಡಿದೆ.
ಎ.ಕ್ಯೂ.ಖಾನ್ ಅವರನ್ನು ಪಾಕಿಸ್ತಾನದ ಪರಮಾಣು ಬಾಂಬ್ ಜನಕ ಎಂದೇ ಕರೆಯಲಾಗುತ್ತಿದೆ. ಪರ್ವೇಜ್ ಮುಷರ್ರಫ್ ಆಡಳಿತಾವಧಿಯ ಸಂದರ್ಭದ 2004ರಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಇರಾನ್, ಉತ್ತರ ಕೊರಿಯಾ ಹಾಗೂ ಲಿಬಿಯಾ ದೇಶಗಳಿಗೆ ಪರಮಾಣು ರಹಸ್ಯಗಳನ್ನು ಮಾರಾಟ ಮಾಡಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿದ್ದರು. ಈ ಘಟನೆ ಬಳಿಕ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.
ಖಾನ್ ಅವರ ಮೇಲೆ ಹೇರಿರುವ ಬಂಧನಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಇದೀಗ ಹೈಕೋರ್ಟ್ ಬಂಧಮುಕ್ತ ಮಾಡಿರುವುದಾಗಿ ವಕೀಲ ಇಕ್ಬಾಲ್ ಜಾಫ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |