ಸರಕಾರದಿಂದ ಸಂರಕ್ಷಣಾ ಪ್ಯಾಕೇಜ್ ಪಡೆಯಲಿರುವ ಬ್ಯಾಂಕುಗಳಲ್ಲಿ ವಿದೇಶೀ ನೌಕರರ ನೇಮಕಾತಿಯನ್ನು ನಿರ್ಬಂಧಿಸುವ ವಿಧೇಯಕಕ್ಕೆ ಅಮೆರಿಕ ಸೆನೆಟ್ ಶುಕ್ರವಾರ ಅಂಗೀಕಾರ ನೀಡಿದೆ. ನೇಮಕಾತಿ ಸಂದರ್ಭದಲ್ಲಿ ವಿದೇಶೀಯರತ್ತ ಮುಖ ಮಾಡುವ ಮೊದಲು, ಅಮೆರಿಕನ್ ನೌಕರರನ್ನು ಬ್ಯಾಂಕುಗಳು ಪರಿಗಣನೆಗೆ ತೆಗೆದುಕೊಳ್ಳುವಂತಾಗಲು ಮತ್ತು ಎಚ್-1ಬಿ ವಿಸಾ ಕಾರ್ಯಕ್ರಮದಲ್ಲಿರುವ ವಿದೇಶೀ ನೌಕರರು ಅಮೆರಿಕನ್ನರ ಸ್ಥಾನ ಆಕ್ರಮಸಿದಂತೆ ತಡೆಯುವ ಮೂಲ ಉದ್ದೇಶವನ್ನು ಈ ವಿಧೇಯಕ ಹೊಂದಿದೆ.
ಈ ಮಸೂದೆಯು ಎರಡು ವರ್ಷ ಅವಧಿಯದ್ದಾಗಿದ್ದು, ಶಾಸನವಾಗಿ ರೂಪುಗೊಂಡರೆ ಅಮೆರಿಕ ಸರಕಾರದ ಮೂಲಕ ತೆರಿಗೆದಾರರ ಹಣದಿಂದ ಸಂರಕ್ಷಣಾ ಪ್ಯಾಕೇಜ್ ಪಡೆಯುತ್ತಿರುವ 300ಕ್ಕೂ ಹೆಚ್ಚು ಅಮೆರಿಕನ್ ಬ್ಯಾಂಕುಗಳಿಗೆ ಅನ್ವಯವಾಗಲಿದೆ.
ದೇಶದ ಆರ್ಥಿಕತೆ ಪುನರುಜ್ಜೀವನಗೊಳಿಸುವ ರಾಷ್ಟ್ರಪತಿ ಬರಾಕ್ ಒಬಾಮ ಅವರ ಯೋಜನೆಯ ಅಂಗವಾಗಿ ಅಮೆರಿಕದ ಶಾಸಕಾಂಗ ಸದಸ್ಯರು ರೂಪಿಸುತ್ತಿರುವ ಮಹಾನ್ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ನ ಭಾಗವಾಗಿ ಈ ನಿರ್ಬಂಧವನ್ನು ಸೇರಿಸಲಾಗಿದೆ.
ಈ ವಿದೇಯಕವು ಶಾಸನ ರೂಪ ತಳೆದರೆ, ವಿದೇಶೀ ನೌಕರರನ್ನು ನೇಮಿಸಿಕೊಳ್ಳಲು ವೀಸಾ ಕೋರುವ ಬ್ಯಾಂಕುಗಳು, ಈ ರೀತಿ ವೀಸಾ ಅರ್ಜಿ ಸಲ್ಲಿಸುವ ಮೂರು ತಿಂಗಳ ಮೊದಲು ಮತ್ತು ಮೂರು ತಿಂಗಳ ನಂತರ ಯಾವುದೇ ಅಮೆರಿಕನ್ ನೌಕರರನ್ನು ತೆಗೆದುಹಾಕುವಂತಿಲ್ಲ ಅಥವಾ ಬದಲಾಯಿಸುವಂತಿಲ್ಲ.
ಇದು ಕಡಿಮೆ ವೇತನಕ್ಕಾಗಿ ವಿದೇಶದಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಬ್ಯಾಂಕುಗಳಿಗೆ ಕಡಿವಾಣ ಹಾಕಲಿದೆ. |