ತಾಲಿಬಾನ್ ಮತ್ತು ಅಲ್ ಖೈದಾ ಉಗ್ರಗಾಮಿ ಸಂಘಟನೆಗಳು ಪ್ರಾಬಲ್ಯ ಮೆರೆಯುತ್ತಿರುವ, ಕಾನೂನು-ರಹಿತ ಪ್ರದೇಶವಾಗಿಬಿಟ್ಟಿರುವ ವಾಯುವ್ಯ ಪಾಕಿಸ್ತಾನದ ಮೇಲೆ ಪಾಕಿಸ್ತಾನೀ ಸಮರ ಹೆಲಿಕಾಪ್ಟರ್‌ಗಳು ದಾಳಿ ನಡೆಸಿ 52 ಮಂದಿ ಉಗ್ರಗಾಮಿಗಳನ್ನು ಕೊಂದು ಹಾಕಿವೆ.
ಖೈಬರ್ ಪ್ರದೇಶದಲ್ಲಿ ಶುಕ್ರವಾರ ಈ ದಾಳಿ ನಡೆದಿದ್ದು, ಉಗ್ರಗಾಮಿಗಳ ಐದು ಅಡಗುದಾಣಗಳು, ಬೃಹತ್ ಶಸ್ತ್ರಾಸ್ತ್ರ ಡಿಪೋ ಮತ್ತು ಉಗ್ರರ ಎಂಟು ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಆ ಪ್ರದೇಶದಲ್ಲಿ ಸರಕಾರದ ಪ್ರಮುಖ ಪ್ರತಿನಿಧಿ ಫಜಲ್ ಮಹಮೂದ್ ತಿಳಿಸಿದ್ದಾರೆ.
ಈ ಪ್ರದೇಶವು ಅತ್ಯಂತ ಅಪಾಯಕಾರಿಯಾಗಿರುವುದರಿಂದ ಅವರ ಹೇಳಿಕೆಯನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ಸುದ್ದಿಮೂಲಗಳಿಗೆ ಸಾಧ್ಯವಾಗಿಲ್ಲ.
ಉಗ್ರಗಾಮಿಗಳು ಇತ್ತೀಚಿನ ದಿನಗಳಲ್ಲಿ ಖೈಬರ್ ಪ್ರದೇಶದಲ್ಲಿ ತಮ್ಮ ದಾಳಿಗಳನ್ನು ಹೆಚ್ಚಿಸಿದ್ದರು. ಮತ್ತು ಈ ಮೂಲಕ ನೆರೆಯ ಅಪಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಡುತ್ತಿರುವ ಪಾಶ್ಚಾತ್ಯ ಸೇನಾಪಡೆಗಳಿಗೆ ಸಾಮಗ್ರಿ ಪೂರೈಕೆಗೆ ತೀವ್ರ ಹಿನ್ನಡೆಯುಂಟು ಮಾಡುತ್ತಿದ್ದರು.
ಉಗ್ರರು ಕಳೆದ ಮಂಗಳವಾರ ಒಂದು ಸೇತುವೆಗೆ ಬಾಂಬ್ ಹಾಕಿ ನಾಶಪಡಿಸಿದ್ದು, ಸಾಮಗ್ರಿ ಪೂರೈಕೆ ವ್ಯವಸ್ಥೆಗೆ ತೀವ್ರ ಹಿನ್ನಡೆಯಾಗಿತ್ತು. ಶುಕ್ರವಾರ ಸೇತುವೆಯನ್ನು ದುರಸ್ತಿ ಮಾಡಲಾಗಿದ್ದು, ನ್ಯಾಟೋ ಮತ್ತು ಅಮೆರಿಕ ಪಡೆಗಳಿಗೆ ಆಹಾರ ಮತ್ತಿತರ ಸೌಕರ್ಯಗಳ ಪೂರೈಕೆ ಸುಗಮವಾಗಿದೆ. |