ಶ್ರೀಲಂಕಾದ ಜರ್ಜರಿತ ಉತ್ತರಭಾಗಕ್ಕೆ ಪ್ರಜಾಪ್ರಭುತ್ವ ಚೌಕಟ್ಟಿನಡಿಯಲ್ಲಿ ವೀಕೇಂದ್ರೀಕರಣ ಪ್ಯಾಕೇಜ್ ರೂಪಿಸಲಾಗುವುದು ಎಂದು ಶ್ರೀಲಂಕಾ ತಿಳಿಸಿದ್ದು, ಸರ್ಕಾರಕ್ಕೆ ನಾಗರಿಕರ ಭದ್ರತೆ ಮತ್ತು ಅಭಿವೃದ್ಧಿಗೆ ಪರಮೋಚ್ಛ ಪ್ರಾಮುಖ್ಯತೆ ನೀಡುವುದೆಂದು ತಿಳಿಸಿದೆ.
ತಮ್ಮ ಸರ್ಕಾರವು ಬಹುಜನಾಂಗೀಯ ಸಮಾಜದ ಪರ ನಿಲುವನ್ನು ಹೊಂದಿದ್ದು, ಕೇಂದ್ರದಿಂದ ಅಧಿಕಾರ ವಿಕೇಂದ್ರೀಕರಣವು ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ರೂಪಿಸುವುದಾಗಿ ಶ್ರೀಲಂಕಾ ವಿದೇಶಾಂಗ ಸಚಿವ ರೋಹಿತಾ ಬೊಗೋಲ್ಲಗಾಮಾ ಡೆನ್ಮಾರ್ಕ್ ಸಹವರ್ತಿ ಪರ್ ಸ್ಟಿಗ್ ಮೊಲ್ಲರ್‌ಗೆ ತಿಳಿಸಿದ್ದಾರೆ.
ಮೊಲ್ಲರ್ ಜತೆ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡುತ್ತಿದ್ದ ಬೊಗೊಲ್ಲಾಗಾಮಾ ಎಲ್‌ಟಿಟಿಇ ಹಿಡಿತದ ಪ್ರದೇಶಗಳು ವೇಗವಾಗಿ ಕೈಬಿಡುತ್ತಿದ್ದು, ಮುಲ್ಲೈತಿವುನ ವಿಸುಮಾಡು ಮತ್ತು ಚಲ್ಲೈ ಪ್ರದೇಶಗಳು ಸೇನೆಯ ಕೈವಶವಾಗಿದೆ ಎಂದು ತಿಳಿಸಿದರು.
ಮೊಲ್ಲರ್ ಕರೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದ ಬೊಗೊಲ್ಲಾಗಾಮಾ, ಶ್ರೀಲಂಕಾ ಪರಿಸ್ಥಿತಿ ಬಗ್ಗೆ ತಿರುಚಿದ ಮಾಹಿತಿಗಳಿಗೆ ತಾವು ವಿವರಣೆ ನೀಡಲು ಅವಕಾಶ ಸಿಕ್ಕಿದೆ ಎಂದು ಹೇಳಿದರು.ಉತ್ತರದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರ ಬಗ್ಗೆ ಮೊಲ್ಲರ್ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್‌ಟಿಟಿಇ ಮುಗ್ಧ ತಮಿಳುನಾಗರಿಕರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿರುವುದು ವಿಷಾದನೀಯ ಎಂದು ತಿಳಿಸಿದರು
|