ಬಾಂಗ್ಲಾ ಭಯೋತ್ಪಾದಕ ಸಂಘಟನೆಯು ಮುಂಬೈ ಕಗ್ಗೊಲೆಯಲ್ಲಿ ಭಾಗಿಯಾದ ಭಯೋತ್ಪಾದಕರ ಜತೆ ಸಖ್ಯ ಹೊಂದಿದೆ ಎಂದು ಪಾಕಿಸ್ತಾನದ ತನಿಖಾದಳದ ಹೇಳಿಕೆಗೆ ಬಾಂಗ್ಲಾದ ಅವಾಮಿ ಲೀಗ್ ನೇತೃತ್ವದ ಸರ್ಕಾರ ಖಾರವಾಗಿ ಪ್ರತಿಕ್ರಿಯಿಸಿದೆ.
ಈ ಕುರಿತು ಪಾಕಿಸ್ತಾನ ತನಿಖಾಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಬಾಂಗ್ಲಾ ಗೃಹಸಚಿವೆ ಸಹಾರಾ ಖಾಟುನ್, 'ಉಗ್ರಗಾಮಿಗಳು ಯಾವುದೇ ಪ್ರದೇಶ, ರಾಷ್ಟ್ರಕ್ಕೆ ಸೇರಿದವರೆಂದು ನಿರ್ಧರಿಸುವುದು ಸರಿಯಲ್ಲ. ಪಾಕ್ ಹೇಳಿಕೆಯಿಂದ ತಮಗೆ ಆಘಾತವಾಗಿದ್ದಾಗಿ' ಪ್ರತಿಕ್ರಿಯಿಸಿದ್ದಾರೆ.
ನಿಷೇಧಿತ ಸಂಘಟನೆ ಹರ್ಕತ್-ಉಲ್-ಜಿಹಾದ್ ಅಲ್ ಇಸ್ಲಾಮಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಲ್ಲದೇ ದಾಳಿಯ ಸಂಚು ಮತ್ತು ತರಬೇತಿಯಲ್ಲಿ ಪಾತ್ರವಹಿಸಿದ್ದಕ್ಕೆ ಪುರಾವೆ ಸಿಕ್ಕಿರುವುದಾಗಿ ಪಾಕಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆಂದು ಪಾಕ್ ದಿನಪತ್ರಿಕೆ ವರದಿ ಮಾಡಿತ್ತು.
ವಾಣಿಜ್ಯ ನಗರಿ ಮುಂಬೈನಲ್ಲಿ ಸಂಭವಿಸಿದ ಭಯೋತ್ಪಾದನೆ ದಾಳಿಗಳಲ್ಲಿ ಕನಿಷ್ಠ 180 ಜನರು ಸಾವಪ್ಪಿದ್ದರು. ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕುವ ಸರ್ಕಾರದ ನಿರ್ಧಾರವನ್ನು ಪುನರುಚ್ಚರಿಸಿದ ಗೃಹಸಚಿವೆ, ಅವಾಮಿ ಲೀಗ್ ಚುನಾವಣೆ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ದಕ್ಷಿಣ ಏಷ್ಯಾ ಭಯೋತ್ಪಾದನೆ ನಿಗ್ರಹ ಕಾರ್ಯಪಡೆಯನ್ನು ರಚಿಸಬೇಕೆಂಬ ಪ್ರಸ್ತಾಪ ಮುಂದಿಟ್ಟರು.
|