ಮುಂಬೈ ಉಗ್ರರ ದಾಳಿ ಸಂಬಂಧ ಪಾಕಿಸ್ತಾನವು ತನ್ನ ತನಿಖೆಗಳನ್ನು ಪೂರ್ಣಗೊಳಿಸಿದ್ದು, ಪೂರಕ ದಾಖಲೆಗಳನ್ನು ಸೋಮವಾರ ಭಾರತದೊಂದಿಗೆ ಹಂಚಿಕೊಳ್ಳಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ ಪಾಕಿಸ್ತಾನ ತನಿಖೆ ನಡೆಸಿ ಸಿದ್ಧಗೊಳಿಸಿರುವ ವರದಿಯಲ್ಲಿ, ಮುಂಬೈ ದಾಳಿಯ ಯೋಜನೆಯನ್ನು ಭಾರತ ಅಥವಾ ಪಾಕಿಸ್ತಾನದಲ್ಲಿ ರೂಪಿಸಿಲ್ಲ. ಬದಲಿಗೆ ಬೇರೆ ದೇಶದಲ್ಲಿ ನಡೆಸಲಾಗಿದೆ ಎಂದಿದೆ ಎನ್ನಲಾಗಿದೆ. ಅಲ್ಲದೆ ದಾಳಿಕೋರರಿಗೆ ಸಹಾಯ ಮಾಡಿದವರು ಭಾರತದಲ್ಲಿಯೇ ಇದ್ದಾರೆ. ಈ ಸಂಬಂಧ ಅಜ್ಮಲ್ ಕಸಬ್‌ನನ್ನು ವಿಚಾರಿಸಿ ಅವರ ಬಗ್ಗೆ ಮಾಹಿತಿ ಪಡೆಯಲು ಇಸ್ಲಾಮಾಬಾದ್ ವಿನಂತಿಸಿಕೊಳ್ಳಲಿದೆ ಎಂದೂ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕಸಬ್ ಸೇರಿದಂತೆ ದಾಳಿಯಲ್ಲಿ ಪಾಲ್ಗೊಂಡ ಒಟ್ಟು ಐವರನ್ನು ಪಾಕಿಸ್ತಾನೀಯರೆಂದು ಒಪ್ಪಿಕೊಳ್ಳಲಿದೆ ಎಂದೂ ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ಅವರ ವಿರುದ್ಧ ಸ್ವತಃ ಪಾಕಿಸ್ತಾನ ಪ್ರಕರಣ ದಾಖಲಿಸಿಕೊಂಡಿದೆ ಎಂದೂ ಹೇಳಲಾಗಿದೆ.
ಇಂದು ರಕ್ಷಣಾ ಸಂಯೋಜನಾ ಸಮಿತಿ ಮಧ್ಯಾಹ್ನ 12 ಗಂಟೆಗೆ ಸಂಸತ್ ಭವನದಲ್ಲಿ ಸಭೆ ಸೇರಲಿದ್ದು, ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂಬಂಧ ಪ್ರಧಾನಿಯವರ ಕಚೇರಿ ನೊಟೀಸ್ ಬಿಡುಗಡೆ ಮಾಡಿದೆ.
ಮುಂಬೈ ದಾಳಿಯ ಸಂಬಂಧ ಪಾಕಿಸ್ತಾನ ನಡೆಸಿರುವ ತನಿಖಾ ವರದಿಗಳನ್ನು ರಕ್ಷಣಾ ಸಂಯೋಜನಾ ಸಮಿತಿ ಒಮ್ಮೆ ಪರಿಶೀಲಿಸಿದ ನಂತರ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಅದೇ ಹೊತ್ತಿಗೆ ಪಾಕಿಸ್ತಾನ ಮತ್ತು ಅಫಘಾನಿಸ್ತಾನಕ್ಕಾಗಿನ ಅಮೆರಿಕಾದ ವಿಶೇಷ ರಾಯಭಾರ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಸೋಮವಾರ ಸಂಜೆ ಇಸ್ಲಾಮಾಬಾದ್‌ಗೆ ಭೇಟಿ ನೀಡಲಿದ್ದಾರೆ.
|