ಮುಂಬಯಿ ಮೇಲಿನ ಉಗ್ರಗಾಮಿಗಳ ದಾಳಿ ಕುರಿತಾದ ಪಾಕಿಸ್ತಾನದ ತನಿಖೆ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಬಾಂಗ್ಲಾ ದೇಶೀಯರ ಕೈವಾಡ ಎಂದು ಹೇಳಿದ್ದ ಪಾಕಿಸ್ತಾನ, ಇದೀಗ ಮತ್ತೊಂದು ಸುಳ್ಳು ಹೇಳಲು ಸಿದ್ಧತೆ ಮಾಡಿಕೊಂಡಿದೆ. ಬಹುತೇಕ ಇಂದು ಬಿಡುಗಡೆ ಮಾಡಲಿರುವ ಈ ವರದಿಯಲ್ಲಿ, ಮುಂಬಯಿ ದಾಳಿ ಸಂಚನ್ನು ಬ್ರಿಟನ್‌ನಲ್ಲಿ ರೂಪಿಸಲಾಗಿದೆ ಎಂದು ಪಾಕಿಸ್ತಾನ ಸುಳ್ಳು ಹೇಳಲಿದೆ.
26/11 ದಾಳಿಯ ಸಂಚನ್ನು ಭಾರತದಲ್ಲಾಗಲೀ, ಪಾಕಿಸ್ತಾನದಲ್ಲಾಗಲೀ ಮಾಡಲಾಗಿಲ್ಲ. ಇದನ್ನು ಯೂರೋಪ್ ಖಂಡದ ದೇಶವೊಂದರಲ್ಲಿ ರೂಪಿಸಲಾಗಿತ್ತು. ಮತ್ತು ಇಂಟರ್ನೆಟ್ ಮೂಲಕ ಉಗ್ರಗಾಮಿಗಳು ಪರಸ್ಪರ ಸಂವಹನ ಮಾಡುತ್ತಿದ್ದರು ಎಂದು ವರದಿಯಲ್ಲಿ ಪಾಕಿಸ್ತಾನ ಹೇಳಲಿರುವುದಾಗಿ ಜಿಯೋ ನ್ಯೂಸ್ ಚಾನೆಲ್ ವರದಿ ಮಾಡಿದೆ.
ಮುಂಬಯಿ ದಾಳಿಯಲ್ಲಿ ಸೆರೆಸಿಕ್ಕ ಏಕೈಕ ಉಗ್ರಗಾಮಿ, ಪಾಕಿಸ್ತಾನದ ಪಠಾಣ್‌ಕೋಟ್‌ನವನಾದ ಅಜ್ಮಲ್ ಅಮೀರ್ ಕಸಬ್‌ನನ್ನು ಪಾಕಿಸ್ತಾನದ ಕಾನೂನಿನಂತೆ ಅಲ್ಲೇ ವಿಚಾರಣೆಗೆ ಗುರಿಪಡಿಸುವ ನಿಟ್ಟಿನಲ್ಲಿ ಆಸಿಫ್ ಅಲಿ ಜರ್ದಾರಿ ಸರಕಾರವು, ಆತನನ್ನು ತಮ್ಮ ವಶಕ್ಕೊಪ್ಪಿಸುವಂತೆ ಭಾರತವನ್ನು ಒತ್ತಾಯಿಸುವ ಸಾಧ್ಯತೆಯಿದೆ.
ಕಸಬ್ ಸೇರಿದಂತೆ ಐವರ ವಿರುದ್ಧ ಪಾಕಿಸ್ತಾನದಲ್ಲಿ ಕೇಸು ದಾಖಲಿಸಲಾಗುತ್ತದೆ. ಕಸಬ್‌ನ 'ಭಾರತೀಯ ಸಹಚರರ'ನ್ನು ಕಂಡು ಹಿಡಿಯುವುದಕ್ಕಾಗಿ ಆತನನ್ನು ತಮಗೊಪ್ಪಿಸಲು, ಅಥವಾ ಆತನ ವಿಚಾರಣೆಗೆ ಅವಕಾಶ ನೀಡಲು ಪಾಕಿಸ್ತಾನವು ಕೋರಲಿದೆ ಎಂದು ಮೂಲಗಳು ಹೇಳಿವೆ.
ಆಂತರಿಕ ಸಚಿವಾಲಯವು ತಯಾರಿಸಿದ ಈ ತನಿಖಾ ವರದಿಯನ್ನು ಕಾನೂನು ಸಚಿವಾಲಯವು ಪರಿಶೀಲಿಸಿ ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಿತ್ತು. ಪ್ರಧಾನಿ ಕಾರ್ಯಾಲಯವು ಅದನ್ನು ಪ್ರಮುಖ ಸಚಿವರು ಹಾಗೂ ಸೇನಾಪಡೆಗಳ ಮುಖ್ಯಸ್ಥರುಳ್ಳ ಸಂಪುಟದ ರಕ್ಷಣಾ ಸಮಿತಿಗೆ ಸೋಮವಾರ ಒಪ್ಪಿಸುತ್ತಿದೆ ಎಂದು ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಹೇಳಿದ್ದಾರೆ.
ಈ ಹಿಂದೆ, ಮುಂಬಯಿ ದಾಳಿಯನ್ನು ಬಾಂಗ್ಲಾದೇಶದ ಹರ್ಕತುಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಉಗ್ರರು ಮಾಡಿದ್ದರು ಎಂದು ಪಾಕಿಸ್ತಾನವು ಕಂಡುಕೊಂಡಿರುವುದಾಗಿ ಡಾನ್ ಪತ್ರಿಕೆ ಈ ಹಿಂದೆ ವರದಿ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. |