ಮುಂಬೈ ದಾಳಿ ಸಂಬಂಧ ಬಂಧಿತ ಉಗ್ರ ಅಜ್ಮಲ್ ಕಸಬ್ ತನ್ನ ಪ್ರಜೆಯಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ತಾನ ಇದೀಗ ಕಸಬ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದೆ.
ಮುಂಬೈ ದಾಳಿ ಕುರಿತು ಪಾಕಿಸ್ತಾನ ನಡೆಸಿದ ತನಿಖೆಯಲ್ಲಿ ಆರೋಪಿಗಳೆಂದು ಕಂಡು ಬಂದ ಕಸಬ್ ಸೇರಿದಂತೆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಜಿಯೋ ಟಿವಿ ವರದಿ ತಿಳಿಸಿದೆ.
ಮುಂಬೈ ದಾಳಿಗೆ ಸಂಬಂಧಿಸಿದ ತನಿಖೆ ಪೂರ್ಣಗೊಂಡಿದೆ. ಅಲ್ಲದೇ ಐದು ಮಂದಿಯ ವಿರುದ್ಧ ದೂರು ದಾಖಲಿಸಿಕೊಳ್ಳಲು ಸರ್ಕಾರ ಅಧಿಕೃತವಾಗಿ ನಿರ್ಧರಿಸಿದೆ. ಹಾಗೆಯೇ ಮುಂಬೈ ಮೇಲಿನ ದಾಳಿ ಸಂಚನ್ನು ಪಾಕಿಸ್ತಾನದಲ್ಲಾಗಲಿ, ಭಾರತದಲ್ಲಿ ನಡೆಸಿಲ್ಲ, ಬದಲಾಗಿ ಅದು ರೂಪುಗೊಂಡಿದ್ದು ಯುರೋಪಿಯನ್ ದೇಶದಲ್ಲಿ ಎಂದು ಪಾಕ್ ಆಂತರಿಕ ಸಚಿವಾಲಯ ಮತ್ತೊಂದು ರಾಗ ಎಳೆಯತೊಡಗಿದೆ.
ದಾಳಿ ಸಂಚನ್ನು ಇಂಟರ್ನೆಟ್ ಮೂಲಕ ರೂಪಿಸಿರುವುದಾಗಿ ಮೂಲಗಳು ತಿಳಿಸಿರುವುದಾಗಿ ಜಿಯೋ ವರದಿ ಹೇಳಿದೆ. ತನಿಖಾ ವರದಿಯನ್ನು ಸೋಮವಾರ ಭಾರತಕ್ಕೆ ನೀಡಲಾಗುವುದು ಎಂದು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಭಾನುವಾರ ಪ್ರತಿಕ್ರಿಯೆ ನೀಡಿದ್ದರು. |