ಅದಾಗಲೇ ಆರು ಮಕ್ಕಳನ್ನು ಹೊಂದಿದ್ದ ಹೊರತಾಗಿಯೂ, ಒಂದೇ ಬಾರಿಗೆ ಎಂಟು ಮಕ್ಕಳನ್ನು ಹೆತ್ತ ತನ್ನ ಮಗಳ ವಿರುದ್ಧ ಆಕೆಯ ತಾಯಿ ಕೆಂಡ ಕಾರಿದ್ದಾರೆ. ನದಿಯಾ ಸುಲೆಮಾನ್ ಎಂಬಾಕೆ ಕಳೆದ ಜನವರಿ 26ರಂದು ಎಂಟು ಮಕ್ಕಳನ್ನು ಹೆತ್ತು, ತನ್ನ ಮಕ್ಕಳ ಸಂಖ್ಯೆಯನ್ನು 14ಕ್ಕೇರಿಸಿಕೊಂಡಿದ್ದಳು. ಆಕೆ ಆಸ್ಪತ್ರೆಯಲ್ಲಿರುವಾಗ, ಮೊದಲಿನ ಆರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದುದು ನದಿಯಾಳ ತಾಯಿ ಏಜೆಂಲಾ ಸುಲೇಮಾನ್.
'ಅವಳಿಗೆ ಈಗಾಗಲೇ ಆರು ಸುಂದರ ಮಕ್ಕಳಿವೆ. ಹೀಗಿರುವಾಗ ಅವಳೇಕೆ ಹೀಗೆ ಮಾಡಿದಳು?' ಎಂದು ಸೆಲೆಬ್ರಿಟಿ ನ್ಯೂಸ್ ವೆಬ್‌ಸೈಟ್ ರೆಡಾರ್ಆನ್‌ಲೈನ್ ಡಾಟ್ ಕಾಂಗೆ ನೀಡಿರುವ ಸಂದರ್ಶನದಲ್ಲಿ ನದಿಯಾ ಕೇಳಿದ್ದಾಳೆ. 'ಈ ಆರು ಮಕ್ಕಳನ್ನು ನೋಡಿಕೊಳ್ಳಲು ನಾನು ಒದ್ದಾಡುತ್ತಿದ್ದೇನೆ. ನಾವು ಎಲ್ಲ ಮಕ್ಕಳಿಗೂ ಹಾಸಿಗೆ ಹಾಸಬೇಕು, ಶಿಫ್ಟ್‌ಗಳಲ್ಲಿ ಆಹಾರ ನೀಡಬೇಕು, ಮನೆಯಲ್ಲಿಡೀ ಮಕ್ಕಳ ಬಟ್ಟೆಗಳು ರಾಶಿ ಬಿದ್ದಿವೆ' ಎಂದು ಆಕೆ ಹೇಳಿದ್ದಾಳೆ.
ಏಂಜೆಲಾಳ 3 ಬೆಡ್‌ರೂಂ ಇರುವ ಮನೆಯ ಚಿತ್ರಗಳನ್ನೂ ವೆಬ್‌ಸೈಟಿನಲ್ಲಿ ಹಾಕಲಾಗಿದೆ. ಎಲ್ಲ ಮಕ್ಕಳಿಗೂ ನದಿಯಾಳ ಬಯಲಾಜಿಕಲ್ ಬಾಯ್ ಫ್ರೆಂಡೇ ಅಪ್ಪ ಎಂದಿದ್ದಾಳೆ ಏಂಜೆಲಾ. ಆದರೆ, ಅವನನ್ನು ಮದುವೆಯಾಗಲು ನದಿಯಾ ನಿರಾಕರಿಸಿದ್ದಳು. "ಅವನು ಅವಳನ್ನು ತುಂಬಾ ಪ್ರೀತಿಸುತ್ತಿದ್ದ ಮತ್ತು ಮದುವೆಯಾಗಲೂ ಇಚ್ಛಿಸಿದ್ದ. ಆದರೆ ನದಿಯಾ ತಾನೇ ಮಕ್ಕಳನ್ನು ಹೊಂದಬೇಕೆಂಬ ಆಸೆ ಹೊತ್ತಿದ್ದಾಳೆ" ಎಂದು ಏಂಜೆಲಾ ಹೇಳಿದ್ದಾಳೆ.
ಆಕೆಯ ಕೋಪಕ್ಕೆ ಕಾರಣವೂ ಇಲ್ಲದಿಲ್ಲ. ವಿಚ್ಛೇದಿತೆಯಾಗಿರುವ ನದಿಯಾ ಈ ಮಕ್ಕಳನ್ನು ಪಡೆಯುವುದಕ್ಕಾಗಿ ಪ್ರಜನನ ವೈದ್ಯರೊಬ್ಬರನ್ನು ಭೇಟಿಯಾಗಿ, ಅವರ ಸಹಾಯದಿಂದ ಅಂತರ್-ಗರ್ಭಾಶಯ ಪ್ರಜನನ ಚಿಕಿತ್ಸೆ ಮೂಲಕ, ತಾನೇ ಮಕ್ಕಳನ್ನು ಹೆರಲು ನಿರ್ಧರಿಸಿದ್ದಳು. ಆದರೆ ಆರು ಮಕ್ಕಳನ್ನು ಹೆರಲು ಮತ್ತು ಆ ಬಳಿಕ ಎಂಟು ಮಕ್ಕಳನ್ನು ಹೆರಲು ಒಬ್ಬರೇ ವೈದ್ಯರ ಬಳಿಗೆ ಹೋಗಿದ್ದಾಗಿ ನದಿಯಾ ಹೇಳಿದ್ದರೆ, ಏಂಜೆಲಾ ಹೇಳಿಕೆ ಇದಕ್ಕೆ ವ್ಯತಿರಿಕ್ತವಾಗಿತ್ತು. ಎಂಟು ಮಕ್ಕಳನ್ನು ಹಡೆಯಲು ಕಾರಣರಾದ ತಜ್ಞವೈದ್ಯರೇ ಬೇರೆ ಎಂಬುದು ಆಕೆಯ ವಾದ.
ತಾನು ಮತ್ತು ಗಂಡ, ನದಿಯಾಳ ಮೊದಲ ತಜ್ಞವೈದ್ಯರನ್ನು ಸಂಪರ್ಕಿಸಿ, ತಮ್ಮ ಪುತ್ರಿಗೆ ಮತ್ತೊಮ್ಮೆ ಚಿಕಿತ್ಸೆ ಮಾಡದಂತೆ ಕೋರಿಕೊಂಡಿದ್ದರಿಂದ, ನದಿಯಾ ಬೇರೊಬ್ಬ ವೈದ್ಯರ ಬಳಿಗೆ ಹೋಗಿದ್ದಳು ಎಂದಿದ್ದಾರೆ ಏಂಜೆಲಾ.
ಈ ಮಧ್ಯೆ, ಎಂಟು ಮಕ್ಕಳನ್ನು ಹಡೆಯುವಂತೆ ಮಾಡುವ ಮೂಲಕ, ಯಾವುದಾದರೂ ಆರೈಕೆ ಸಂಬಂಧಿತ ನಿಯಮಾವಳಿಯನ್ನು ಈ ತಜ್ಞ ವೈದ್ಯರು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಮೆಡಿಕಲ್ ಬೋರ್ಡ್ ಆಫ್ ಕ್ಯಾಲಿಫೋರ್ನಿಯಾ ವಕ್ತಾರರು ತಿಳಿಸಿದ್ದಾರೆ. |