ಅಫಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಉಗ್ರಗಾಮಿಗಳು ನಿರ್ಭಯವಾಗಿ ಕಾರ್ಯಾಚರಿಸುತ್ತಿದ್ದು ಇದು 'ಭಯೋತ್ಪಾದಕರ ಸ್ವರ್ಗ' ಎನ್ನಲು ಯಾವುದೇ ಸಂಶಯವಿಲ್ಲ ಮತ್ತು ನಾವು ಯಾವುದೇ ಕಾರಣಕ್ಕೂ ಉಗ್ರರು ಸುರಕ್ಷಿತವಾಗಿರಲು ಅವಕಾಶ ನೀಡುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡುವಂತೆ ಪ್ರಸಕ್ತ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕಾದ ವಿಶೇಷ ರಾಯಭಾರಿ ರಿಚರ್ಡ್ ಹಾಲ್ಬೋರ್ಕ್‌ಗೆ ಒಬಾಮಾ ಕರೆ ನೀಡಿದ್ದಾರೆ.
"ಆಲ್-ಖೈದಾ ಕಾರ್ಯಚಟುವಟಿಕೆಗೆ ನಾವು ಯಾವ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಆ ಪ್ರದೇಶದಲ್ಲಿ ಉಗ್ರರ ಸುರಕ್ಷಿತ ತಾಣಗಳನ್ನು ನಾವು ಹೊಂದಲು ಬಯಸುವುದಿಲ್ಲ" ಎಂದು ಅವರು ಹೇಳಿದರು.
"ಪಾಕಿಸ್ತಾನ- ಅಪಘಾನಿಸ್ತಾನ ಗಡಿ ಭಾಗದ ಬುಡಕಟ್ಟು ಪ್ರದೇಶದ ಸಂಯುಕ್ತ ಆಡಳಿತ ವಲಯದಲ್ಲಿ ತಾಲಿಬಾನ್ ಮತ್ತು ಆಲ್-ಖೈದಾಗಳ ಕಾರ್ಯಚಟುವಟಿಕೆ ನಡೆಯುತ್ತಿರುವುದು ಸ್ಪಷ್ಟ" ಎಂದು ಜನವರಿ 20ರಂದು ಅಧಿಕಾರ ವಹಿಸಿಕೊಂಡ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಒಬಾಮಾ ಪಾಕಿಸ್ತಾನಕ್ಕೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರು.
ಅಂತಹ ಸುರಕ್ಷಿತ ಪ್ರದೇಶಗಳನ್ನು ನಾಶ ಮಾಡಿದಲ್ಲಿ ಮಾತ್ರ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ. ನಾವು ಈ ನಿಟ್ಟಿನಲ್ಲಿ ಕಠಿಣ ಕ್ರಮಗಳತ್ತ ಗಮನ ಹರಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
|