ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಕುರಿತಂತೆ ಜಾಗತಿಕವಾಗಿ ಬಿದ್ದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಬುಧವಾರ ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ಹಾಗೂ 13ಮಂದಿಯ ವಿರುದ್ಧ ಭಯೋತ್ಪಾದನೆ ಕಾಯ್ದೆಯಡಿ ದೂರು ದಾಖಲಿಸಿದೆ.
ಮುಂಬೈಯ 26/11ರ ದಾಳಿಯಲ್ಲಿ ಸೆರೆಸಿಕ್ಕ ಅಜ್ಮಲ್ ಹಾಗೂ 13ಮಂದಿ ವಿರುದ್ಧ ಪಾಕ್ ದೂರು ದಾಖಸಿಕೊಂಡಿದೆ ಎಂದು ಪಾಕ್‌ನ ಖಾಸಗಿ ನ್ಯೂಸ್ ಚಾನೆಲ್‌ವೊಂದರ ವರದಿ ತಿಳಿಸಿದ್ದು, ಅಲ್ಲದೇ ಕಸಬ್ ಜತೆ ನಂಟು ಹೊಂದಿದ್ದ ಮತ್ತೆ ಮೂವರನ್ನು ಸೆರೆ ಹಿಡಿದಿರುವುದಾಗಿಯೂ ಹೇಳಿದೆ. ಕರಾಚಿಯ ಡಾಕ್‌ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ದೇಶದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ(ಎಫ್‌ಐಎ) ನಡೆಸಿದ ತನಿಖೆಯ ಬಳಿಕ ಕಸಬ್ ಹಾಗೂ 13ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.
ದಾಳಿ ಕುರಿತಂತೆ ತನಿಖೆಯನ್ನು ಪೂರ್ಣಗೊಳಿಸಬೇಕಿದ್ದರೆ ಭಾರತ ಮತ್ತಷ್ಟು ಮಾಹಿತಿಯನ್ನು ಒದಗಿಸಬೇಕು ಎಂದು ಪಾಕಿಸ್ತಾನ ಮಂಗಳವಾರ ಮತ್ತೊಂದು ಖ್ಯಾತೆ ತೆಗೆದಿತ್ತು.
ಮಾಹಿತಿ ಇಲ್ಲ-ಪ್ರಣಬ್: ಮುಂಬೈ ದಾಳಿ ಕುರಿತು ಪಾಕಿಸ್ತಾನ ಕಸಬ್ ಹಾಗೂ 13ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ. |