ಅಂತೂ ಇಂತೂ ಸಾಕಷ್ಟು ಹಗ್ಗ ಜಗ್ಗಾಟ ನಡೆಸಿ ಕೊನೆಗೂ ಮುಂಬೈ ಭಯೋತ್ಪಾದನಾ ದಾಳಿ ಸಂಬಂಧ ಪಾಕಿಸ್ತಾನ ಗುರುವಾರ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದು, ಮುಂಬೈಯ 26/11 ಷಡ್ಯಂತ್ರದ ಬಹುತೇಕ ಭಾಗ ರೂಪುಗೊಂಡಿದ್ದು ಪಾಕಿಸ್ತಾನದಲ್ಲೇ ಎಂಬುದನ್ನು ಒಪ್ಪಿಕೊಂಡಿದೆ.ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ದಾಳಿ ಕುರಿತು ಎಫ್‌ಐಎ ನಡೆಸಿದ ತನಿಖೆ ಪೂರ್ಣಗೊಂಡಿದ್ದು, ಮಾಹಿತಿಯನ್ನು ಶೀಘ್ರವೇ ಭಾರತ ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ಹಾಗೂ ಒಂಬತ್ತು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದ್ದು, ಅದರಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮಲಿಕ್ ಮಾಹಿತಿ ನೀಡಿದ್ದಾರೆ.ಮುಂಬೈಯ ದಾಳಿ ಷಡ್ಯಂತ್ರದ ಭಾಗಶ ರೂಪುರೇಶೆ ರೂಪುಗೊಂಡಿದ್ದು ಪಾಕಿಸ್ತಾನದಲ್ಲೇ ಎಂದು ಒಪ್ಪಿಕೊಂಡ ಪಾಕ್, ಅದಕ್ಕೆ ಅಂತಿಮ ರೂಪು ಕೊಟ್ಟಿದ್ದು ಮಾತ್ರ ಭಾರತ ಹಾಗೂ ಭಯೋತ್ಪಾದಕರಿಗೆ ತರಬೇತಿ ನೀಡಿದ್ದು ಲಷ್ಕರ್ ಎ ತೊಯಿಬಾದ ಲಕ್ವಿ ಎಂಬುದನ್ನೂ ತಿಳಿಸಿದ್ದಾರೆ. ಭಯೋತ್ಪಾದನೆ ದಾಳಿಯ ಕುರಿತಂತೆ ಭಾರತಕ್ಕೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ ಪಾಕ್, ಮೊದಲ ಬಾರಿಗೆ ದಾಳಿಯ ಸಂಚಿನ ಬಗ್ಗೆ ಹೇಳಿಕೆ ನೀಡಿದೆ.ಅಮೆರಿಕದ ಸರ್ವಿಸ್ ಪ್ರೊವೈಡರ್ ಬಳಕೆ ಮಾಡಲಾಗಿದೆ. ಮುಂಬೈ ಮೇಲೆ ನಡೆದ ದಾಳಿಗೆ ಸೈಬರ್ ನಂಟಿದೆ. ಅಲ್ಲದೇ ಉಗ್ರರು ಸ್ಪೇನ್‌ನ ವಿಓಐಪಿ ಬಳಕೆ ಮಾಡಿದ್ದು, ವಿಓಐಪಿಗೆ ನೆರವು ನೀಡಿದ್ದು, ಜಾವಿದ್ ಇಕ್ಬಾಲ್ ಎಂಬ ವಿಷಯವನ್ನು ಹೊರಗೆಡವಿದೆ.ಮುಂಬೈಯಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಸಂದರ್ಭದಲ್ಲಿ ಉಗ್ರರು ಬಳಸಿದ್ದ ರಬ್ಬರ್ ಬೋಟ್ ಮಾರಾಟ ಮಾಡಿದ ಮಾಲೀಕನನ್ನು ಕೂಡ ಪತ್ತೆ ಹಚ್ಚಲಾಗಿದ್ದು, ಆತನಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದು, ಆತ ನೀಡಿದ ದೂರವಾಣಿ ಸಂಖ್ಯೆ ನಮ್ಮ ತನಿಖೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದಿರುವ ಪಾಕ್, ಮುಂಬೈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಈ ಸಂದರ್ಭದಲ್ಲಿ ವಿವರಿಸಿದೆ. |