ಮುಂಬೈ ಭಯೋತ್ಪಾದನೆ ದಾಳಿ ಸಂಬಂಧ ಪಾಕಿಸ್ತಾನದ ತನಿಖಾ ವರದಿಯನ್ನು ಟೀಕಿಸಿರುವ ನಿಷೇಧಿತ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆ, ತನ್ನ ನಾಯಕರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದ್ದು ಪಾಕಿಸ್ತಾನವು ಭಾರತ ಮತ್ತು ಅಮೆರಿಕಾದ ಮೆಚ್ಚುಗೆ ಗಳಿಸುವ ಯತ್ನಕ್ಕೆ ಕೈ ಹಾಕಿದೆ ಎಂದು ಕಿಡಿ ಕಾರಿದೆ.
"ಭಾರತದೆದುರು ಪಾಕಿಸ್ತಾನವು ಶರಣಾಗಿದೆ. ಮುಂಬೈ ಭಯೋತ್ಪಾದನಾ ದಾಳಿಯ ಹಿಂದೆ ಲಷ್ಕರ್ ಇ ತೊಯ್ಬಾ ಪಾಲ್ಗೊಂಡಿಲ್ಲ" ಎಂದು ಉಗ್ರಗಾಮಿ ಸಂಘಟನೆಯ ವಕ್ತಾರ ಅಬ್ಬುಲ್ಲಾಹ್ ಘಜ್ನವಿ ತಿಳಿಸಿದ್ದಾನೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ತಮ್ಮ ಹಿರಿಯ ಕಮಾಂಡರ್ ಝಾಕಿರ್ ರಹಮಾನ್ ಲಖ್ವಿ ವಿರುದ್ಧ ತನಿಖೆಗೆ ನಿರ್ಧರಿಸಿರುವುದನ್ನು ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಲಷ್ಕರ್ ತೀವ್ರವಾಗಿ ಖಂಡಿಸಿದೆ.
"ಎಫ್‌ಐಆರ್ ದಾಖಲಿಸಿರುವುದನ್ನು ಲಷ್ಕರ್ ತೀವ್ರವಾಗಿ ಖಂಡಿಸುತ್ತದೆ. ಭಾರತ ಮತ್ತು ಅಮೆರಿಕಾದಿಂದ ಬೆನ್ನು ತಟ್ಟಿಸಿಕೊಳ್ಳಲು ಪಾಕಿಸ್ತಾನ ಈ ಎಫ್‌ಐಆರ್ ದಾಖಲಿಸಿದೆ" ಎಂದು ಸುದ್ದಿ ಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಗಜ್ನವಿ ತಿಳಿಸಿದ್ದಾನೆ.
"ಅಮೆರಿಕಾವು ಬಹಿರಂಗವಾಗಿ ಭಾರತವನ್ನು ಬೆಂಬಲಿಸಿದ್ದು, ಪಾಕಿಸ್ತಾನ ಮೇಲೆ ಒತ್ತಡ ಹೇರಲಾಗಿದೆ. ಪಾಕಿಸ್ತಾನವು ಯಾರನ್ನು ಮೆಚ್ಚಿಸಲು ಇಂತಹ ಕ್ರಮಗಳಿಗೆ ಮುಂದಾಗಿದೆ ಎಂಬುದನ್ನು ಆಂತರಿಕ ಸಚಿವಾಲಯ ಮುಖ್ಯಸ್ಥ ರೆಹಮಾನ್ ಮಲಿಕ್ ಸ್ಪಷ್ಟಪಡಿಸಬೇಕು" ಎಂದು ಆತ ಆಗ್ರಹಿಸಿದ್ದಾನೆ.
|