ಪಾಕಿಸ್ತಾನದಾದ್ಯಂತ ತಾಲಿಬಾನ್ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿ ಬಲವೃದ್ದಿಗೊಂಡಿದ್ದು, ತಾಲಿಬಾನ್ ಕಪಿಮುಷ್ಠಿಯಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಇಸ್ಲಾಂ ಮೂಲಭೂತವಾದಿ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಹೋರಾಡಲಿದೆ ಎಂದು ಕೊನೆಗೂ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸಿಬಿಎಸ್ ನ್ಯೂಸ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ತಾಲಿಬಾನ್ ಪಡೆ ಭದ್ರವಾಗಿ ತಳವೂರಿರುವುದಾಗಿ ಸ್ವತಃ ಒಪ್ಪಿಕೊಂಡಿರುವ ಜರ್ದಾರಿ ಉಗ್ರರನ್ನು ಮಟ್ಟಹಾಕುವುದು ನಿಶ್ಚಿತ ಎಂದು ಸಿಬಿಎಸ್‌ಗೆ 60ನಿಮಿಷಗಳ ಕಾಲ ನೀಡಿದ ಸಂದರ್ಶನ ಭಾನುವಾರ ಪ್ರಸಾರಗೊಳ್ಳಲಿದ್ದು, ಅದರ ಕೆಲ ಸಾರಾಂಶಗಳನ್ನು ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಬುಡಕಟ್ಟು ಪ್ರದೇಶ ಉಗ್ರರ ಚಟುವಟಿಕೆ ಸ್ವರ್ಗವಾಗಿದ್ದು, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಮಾಮಾ ಕಳೆದ ವಾರ ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೇ ಉಗ್ರರನ್ನು ಮಟ್ಟ ಹಾಕುವಲ್ಲಿ ಪಾಕಿಸ್ತಾನ ಅಮೆರಿಕದೊಂದಿಗೆ ಕೈಜೋಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದರು.
ಆ ಹಿನ್ನೆಲೆಯಲ್ಲಿ ಬುಧವಾರ ಜರ್ದಾರಿ ಮತ್ತು ಒಬಾಮ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿಯೂ ಪಾಕ್ ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಪಾಕ್-ಅಫ್ಘಾನ್ ಗಡಿಭಾಗಗಳಲ್ಲಿ ನೆಲೆಯೂರಿರುವ ತಾಲಿಬಾನ್, ಅಲ್ ಖಾಯಿದಾ ಉಗ್ರರನ್ನು ಸದೆಬಡಿಯುವ ಕುರಿತು ಇಬ್ಬರು ಅಧ್ಯಕ್ಷರು ಚರ್ಚೆ ನಡೆಸಿದ್ದರು ಎಂದು ವಿವರಿಸಿತ್ತು. |