ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ ಅನ್ನು ಬಗ್ಗುಬಡಿದಿರುವುದಾಗಿ ಹೇಳುತ್ತಿದ್ದ ಶ್ರೀಲಂಕಾ ಸೇನೆಗೆ ಮತ್ತೊಂದು ಆಘಾತಕಾರಿ ಮಾಹಿತಿ ಲಭಿಸಿದ್ದು, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಥೋನಿ ನೇತೃತ್ವ ವಹಿಸಿರುವ ಅಂಶ ಇದೀಗ ಬಯಲುಗೊಂಡಿದೆ.
ಇತ್ತೀಚೆಗಷ್ಟೇ ಬಂಧಿತರಾದ ಬ್ಲ್ಯಾಕ್ ಟೈಗರ್ಸ್‌ಗಳಾದ ಬಾನು ಮತ್ತು ಲಕ್ಷ್ಮಣ್ ಈ ಆಘಾತಕಾರಿ ಅಂಶವನ್ನು ಬಯಲುಗೊಳಿಸಿದ್ದಾರೆ. 2006ರಲ್ಲಿ ಐರ್ಯಲ್ಯಾಂಡ್‌ನಿಂದ ಹಿಂತಿರುಗಿರುವ ಆಂಥೋನಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾನೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಆತ ಎಲ್‌ಟಿಟಿಇ ವೈಮಾನಿಕ ಘಟಕ ಹಾಗೂ ಕಂಪ್ಯೂಟರ್ ಯೂನಿಟ್ ನೇತೃತ್ವ ವಹಿಸಿರುವ ಬಗ್ಗೆ ವರದಿ ತಿಳಿಸಿದೆ.
ಎಲ್‌ಟಿಟಿಇ ವೈಮಾನಿಕ ವಿಂಗ್ ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಂಥೋನಿ ಪ್ರಮುಖ ಪಾತ್ರವಹಿಸಿರುವುದಾಗಿ ಶಂಕಿಸಲಾಗಿದೆ. 2007ರ ಮಾರ್ಚ್‌ನಲ್ಲಿ ಕೊಲೊಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಲಂಕಾ ಮಿಲಿಟರಿ ವೈಮಾನಿಕ ನೆಲೆಯ ಮೇಲೆ ರಾತ್ರಿ ನಡೆಸಿದ ದಾಳಿಗೆ ಜಾಗತಿಕ ಮಟ್ಟದಲ್ಲಿ ಅಚ್ಚರಿ ವ್ಯಕ್ತವಾಗಿತ್ತು.
ಎಲ್‌ಟಿಟಿಇ ಪ್ರಮುಖ ಮುಖಂಡರೊಂದಿಗೆ ಪ್ರಭಾಕರನ್ ಪುತ್ರ ಅಂಥೋನಿ ತಮ್ಮ ಪಡೆಯನ್ನು ಮುನ್ನೆಡೆಸುತ್ತಿರುವುದಾಗಿ ಬಂಧಿತ ಇಬ್ಬರು ಬಂಡುಕೋರರು ಸಂಡೆ ಅಬ್ಸರ್ವರ್‌ಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ. |