ಮುಂಬಯಿ ದಾಳಿಕೋರ ಉಗ್ರರು ಮತ್ತು ಅದನ್ನು ರೂಪಿಸಿದ ಮಾಸ್ಟರ್ ಮೈಂಡ್‌ಗಳು ಈ ಮಾರಣಾಂತಿಕ ಕಾರ್ಯಾಚರಣೆಯ ಮೊದಲು ಮತ್ತು ಅನಂತರ ಸಭೆ ಸೇರಿದ್ದ ಮನೆಯನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಮುಂಬಯಿ ಮತ್ತು ಅದಕ್ಕೆ ಸಮುದ್ರಮಾರ್ಗವನ್ನು ಸ್ಪಷ್ಟವಾಗಿ ಗುರುತು ಹಾಕಲಾಗಿದ್ದ ದೊಡ್ಡ ಭೂಪಟ, ನವೆಂಬರ್ 26ರ ಮುಂಬಯಿ ಹತ್ಯಾಕಾಂಡದ ಕವರೇಜ್ ಇರುವ ಪತ್ರಿಕೆಗಳ ರಾಶಿ ಕೂಡ ಈ ಮನೆಯಲ್ಲಿ ದೊರೆತಿದ್ದು, ತನಿಖಾಧಿಕಾರಿಗಳು ಈಗ ಈ ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಜಿಯೋ ಟಿವಿ ವರದಿ ಹೇಳಿದೆ.
ಬಂಧಿತ ಉಗ್ರಗಾಮಿ ಅಜ್ಮಲ್ ಅಮೀರ್ ಕಸಬ್ ಸೇರಿದಂತೆ ಉಗ್ರಗಾಮಿಗಳು ಬಳಸಿದ್ದ ಈ ಮನೆಯ ವೀಡಿಯೋ ಚಿತ್ರವನ್ನೂ ಟಿವಿಯಲ್ಲಿ ತೋರಿಸಲಾಗಿದ್ದು, ಸ್ಪೀಡ್ ಬೋಟ್, ಮೀನುಗಾರಿಕಾ ಬೋಟುಗಳಲ್ಲಿ ಬಳಸಲಾದ ಉಪಕರಣಗಳು ಮತ್ತು ಭಾರಿ ಪ್ರಮಾಣದ ಔಷಧಿಗಳೂ ಇದರಲ್ಲಿ ಸೇರಿದ್ದವು.
ಕರಾಚಿಯಿಂದ 40 ಕಿ.ಮೀ. ದೂರದಲ್ಲಿರುವ ದೋರಿ ಎಂಬಲ್ಲಿರುವ ಈ ಮನೆಯು ಒಂದು ಕಾಲದಲ್ಲಿ ಸಕಲ ಸೌಲಭ್ಯಗಳುಳ್ಳ ಐಷಾರಾಮಿ ಬಂಗಲೆಯಾಗಿದ್ದ ಕುರುಹುಗಳು ಅಲ್ಲಿವೆ. ಇಸ್ಲಾಮಿಕ್ ಸಾಹಿತ್ಯ ಕೃತಿಗಳೂ ಅಲ್ಲಿ ರಾಶಿ ರಾಶಿ ದೊರೆತಿದ್ದು, ಈ ಸ್ಥಳದಿಂದ ದೂರವಿರುವಂತೆ ತನಗೆ ಆದೇಶಿಸಲಾಗಿತ್ತು ಎಂದು ಈ ಮನೆಯ ಉಸ್ತುವಾರಿಯೊಬ್ಬರು ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ.
ಈ ಮನೆಯಲ್ಲಿ ಏಳು ಮಂದಿ ಇದ್ದದ್ದನ್ನು ನೋಡಿರುವುದಾಗಿ ಸ್ಥಳೀಯರು ಹೇಳಿರುವುದು ಕೂಡ ಟಿವಿಯಲ್ಲಿ ಪ್ರಸಾರವಾಗಿದೆ. ತಿಂಗಳುಗಟ್ಟಲೆ ನಿರಾಕರಣೆಯ ಬಳಿಕ ಪಾಕಿಸ್ತಾನವು, ಮುಂಬಯಿ ದಾಳಿ ಸಂಚು ತನ್ನ ನೆಲದಲ್ಲೇ ನಡೆದಿದ್ದು ಎಂದು ಒಪ್ಪಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. |