ಪಾಕಿಸ್ತಾನದ ಬಹುತೇಕ ಭಾಗದಲ್ಲಿ ನೆಲೆಹೊಂದಿರುವ ತಾಲಿಬಾನ್ ಪಾಕಿಸ್ತಾನದ ಕೈವಶಕ್ಕೆ ಯತ್ನಿಸುತ್ತಿದೆಯೆಂಬ ವರದಿಗಳ ನಡುವೆ, ಪಾಕಿಸ್ತಾನ ಸರ್ಕಾರ ತಾಲಿಬಾನ್ ಜತೆ ಶಾಂತಿ ಮಾತುಕತೆ ಆರಂಭಿಸಿದೆ.
ಸರ್ಕಾರದ ಜತೆ ಶಾಂತಿ ಮಾತುಕತೆಯ ಬಳಿಕ 6 ತಿಂಗಳ ಕೆಳಗೆ ತಾನು ಅಪಹರಿಸಿದ್ದ ಚೀನಾದ ಎಂಜಿನಿಯರ್‌ನನ್ನು ಸದ್ಭಾವನೆಯ ಸಂಕೇತವಾಗಿ ಬಿಡುಗಡೆ ಮಾಡಿದ ತಾಲಿಬಾನ್ ಉಗ್ರಗಾಮಿ ಸಂಘಟನೆ ಪ್ರಕ್ಷುಬ್ಧ ಪೀಡಿತ ವಾಯವ್ಯ ಸ್ವಾಟ್ ಕಣಿವೆಯಲ್ಲಿ 10 ದಿನಗಳ ಕದನವಿರಾಮ ಘೋಷಿಸಿತು.
ಹಿರಿಯ ಧರ್ಮಗುರು ಮತ್ತು ಸ್ಥಳೀಯಾಧಿಕಾರಿಗಳ ಜತೆ ಶಾಂತಿಮಾತುಕತೆಯಲ್ಲಿ ಈ ಪ್ರದೇಶದ ಕೆಲವು ಕಡೆ ಶರಿಯತ್ ಕಾನೂನು ಜಾರಿಗೆ ತರುವ ಬಗ್ಗೆ ಒಪ್ಪಂದ ಕುದುರಿಸಲಾಗಿದೆಯೆಂದು ನಂಬಲಾಗಿದೆ.
ವಿಶ್ವಸಂಸ್ಥೆ ಏಜನ್ಸಿಗೆ ಕೆಲಸ ಮಾಡುತ್ತಿರುವ ಅಮೆರಿಕದ ನೌಕರ ಜಾನ್ ಸೊಲೆಕಿಯನ್ನು ಇಸ್ಲಾಮಿಕ್ ಉಗ್ರಗಾಮಿಗಳು ಕಣಿವೆಯಲ್ಲಿ ಇನ್ನೂ ಹಿಡಿದಿಟ್ಟಿದ್ದು, ಸರ್ಕಾರ ಅಕ್ರಮವಾಗಿ ಬಂಧಿಸಿರುವ 141 ಮಹಿಳೆಯರನ್ನು 72 ಗಂಟೆಗಳಲ್ಲಿ ಬಿಡುಗಡೆ ಮಾಡದಿದ್ದರೆ ಒತ್ತೆಯಾಳನ್ನು ಕೊಲ್ಲುವುದಾಗಿ ತಾಲಿಬಾನಿಗಳು ಬೆದರಿಕೆ ಹಾಕಿದ್ದಾರೆ.
ಕಳೆದ ವರ್ಷ ಸರ್ಕಾರ ಬಿಡುಗಡೆ ಮಾಡಿದ ಟಿಎನ್‌ಎಸ್‌ಎಂ ಮುಖ್ಯಸ್ಥ ಮೌಲಾನಾ ಸೂಫಿ ಮಹಮದ್ ಸರ್ಕಾರದ ಜತೆ ಶಾಂತಿ ಮಾತುಕತೆಯಲ್ಲಿ ನಿರತರಾಗಿದ್ದು, 10 ದಿನಗಳವರೆಗೆ ಕದನವಿರಾಮ ಘೋಷಿಸುವುದಾಗಿ ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ವರದಿಗಾರರಿಗೆ ತಿಳಿಸಿದ್ದಾನೆ.
ಶಾಂತಿ ಮಾತುಕತೆಗೆ ಅವಕಾಶ ಕಲ್ಪಿಸಲು ಸರ್ಕಾರದಿಂದ ಬಂಧಮುಕ್ತನಾದ ಸೂಫಿ ಮಹಮದ್ ಸ್ವಾಟ್‌ನ ಕೆಲವು ಭಾಗಗಳಲ್ಲಿ ಶರಿಯತ್ ಕಾನೂನು ಅನುಷ್ಠಾನಕ್ಕೆ ತರುವ ಬಗ್ಗೆ ಸರ್ಕಾರದ ಜತೆ ಒಪ್ಪಂದ ಕುದುರಿಸಿದ್ದಾನೆ. ಸ್ವಾಟ್‌ನಲ್ಲಿ ತಾಲಿಬಾನ್ ನೇತೃತ್ವ ವಹಿಸಿರುವ ಮೌಲಾಲಾ ಫಜಲುಲ್ಲಾ ಸೂಫಿ ಮಹಮದ್ ಅಳಿಯನಾಗಿದ್ದಾನೆ.
|