ಕಾಳ್ಚಿಚ್ಚನ್ನು ನಂದಿಸಿದ ಬಳಿಕ ಅಗ್ನಿಶಾಮಕ ಸಿಬ್ಬಂದಿಯನ್ನು ಒಯ್ಯುತ್ತಿದ್ದ ಹೆಲಿಕಾಪ್ಟರ್ ದಕ್ಷಿಣ ಚಿಲಿಯಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 14 ಜನರು ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಂಟಿಯಾಗೊ ದಕ್ಷಿಣಕ್ಕೆ 270 ಕಿಮೀ ದೂರದಲ್ಲಿ ಚಾಂಕೊ ಬಳಿಯ ಬೆಟ್ಟವೊಂದಕ್ಕೆ ಭಾನುವಾರ ಹೆಲಿಕಾಪ್ಟರ್ ಅಪ್ಪಳಿಸಿತು.
ಉರಿಯುವ ಬೆಂಕಿಯ ಜ್ವಾಲೆಯೊಂದಿಗೆ ಸೆಣೆಸಿದ 12 ಅಗ್ನಿಶಾಮಕ ಸಿಬ್ಬಂದಿಯನ್ನು ಇಬ್ಬರು ಪೈಲಟ್‌ಗಳು ರಕ್ಷಿಸಿ ಹೆಲಿಕಾಪ್ಟರ್‌ನಲ್ಲಿ ಒಯ್ಯುವಾಗ ದುರಂತ ಸಂಭವಿಸಿದೆ. ಅಪ ಘಾತದ ಸಂದರ್ಭದಲ್ಲಿ ಬೆಂಕಿಯನ್ನು ಇನ್ನೂ ನಿಯಂತ್ರಿಸಲಾಗುತ್ತಿತ್ತು. ಚಿಲಿಯ ಟಿಂಬರ್ ಕಂಪೆನಿ ಸೆಲ್ಕೊನಲ್ಲಿ ಕೆಲಸ ಮಾಡುತ್ತಿದ್ದ 18ರಿಂದ 25ರ ವಯೋಮಾನದ ಯುವಕರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇನ್ನೊಂದು ಟಿಂಬರ್ ಕಂಪೆನಿಯಾದ ಕೊಮೆಕೊ ಆಸ್ತಿಪಾಸ್ತಿಗೆ ಕಾಳ್ಗಿಚ್ಚಿನ ಜ್ವಾಲೆ ಆವರಿಸಿದ್ದಾಗ,ಬೆಂಕಿಯ ಕೆನ್ನಾಲಗೆ ಹರಡದಂತೆ ತಡೆಯಲು ಸೆಲ್ಕೊ ತನ್ನ ಸಿಬ್ಬಂದಿಯನ್ನು ನಿಯೋಜಿಸಿತ್ತು ಎಂದು ಬ್ರಾವೊ ಹೇಳಿದ್ದಾರೆ.
ಅಪಘಾತದ ಸ್ಥಳದಲ್ಲಿ ಬದುಕುಳಿದವರು ಪತ್ತೆಯಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆಂದು ಪ್ರಾದೇಶಿಕ ಸರ್ಕಾರಿ ಕಾರ್ಯದರ್ಶಿ ಡೇನಿಯಲ್ ವರ್ಗೇರಾ ತಿಳಿಸಿದ್ದಾರೆ. ದೇಹಗಳ ತೆರವಿನ ಮೇಲ್ವಿಚಾರಣೆ ಮತ್ತು ಅಪಘಾತಕ್ಕೆ ಕಾರಣದ ತನಿಖೆ ನಡೆಸಲು ವಾಯುಪಡೆ ಪ್ರಾಸಿಕ್ಯೂಟರ್ ಧಾವಿಸಿದ್ದಾರೆ.
|