ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಮೆರಿಕದ ಉನ್ನತ ರಾಜತಾಂತ್ರಿಕರಾಗಿ ತಮ್ಮ ಪ್ರಪ್ರಥಮ ಸಾಗರೋತ್ತರ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಜಪಾನ್, ಇಂಡೊನೇಶಿಯ, ದಕ್ಷಿಣ ಕೊರಿಯ ಮತ್ತು ಚೀನಾಗೆ ಕ್ಲಿಂಟನ್ ಭೇಟಿ ನೀಡುತ್ತಿದ್ದು, 1960ರಿಂದೀಚೆಗೆ ವಿದೇಶಾಂಗ ಕಾರ್ಯದರ್ಶಿಯ ಪ್ರಥಮ ಭೇಟಿಯಾಗಿದೆ.
ಅಮೆರಿಕದ ಜತೆ ತಮ್ಮ ಬಾಂಧವ್ಯ ಗಟ್ಟಿಯಾಗಿದೆಯೆಂದು ಜಪಾನ್‌ಗೆ ಕ್ಲಿಂಟನ್ ಮರುಭರವಸೆ ನೀಡಲಿದ್ದಾರೆಂದು ತಿಳಿದುಬಂದಿದೆ. ಚೀನಾದಲ್ಲಿ ತಾವು ಪಾಲುದಾರರನ್ನು ಪತ್ತೆ ಮಾಡಲು ಆಶಿಸುತ್ತೇವೆಯೇ ಹೊರತು ಎದುರಾಳಿಯನ್ನಲ್ಲ ಎಂದು ಕ್ಲಿಂಟನ್ ಆಶಿಸಿರುವುದಾಗಿ ತಿಳಿದುಬಂದಿದೆ.
ಏಷ್ಯಾ ಜತೆ ಸಂಬಂಧ ವಿಶಾಲಗೊಳಿಸಲು ಮತ್ತು ಆಳಗೊಳಿಸಲು ಅಮೆರಿಕ ಆಸಕ್ತವಾಗಿದೆ ಎಂದು ಕ್ಲಿಂಟನ್ ಹೇಳಿದ್ದಾರೆ. ಅಟ್ಲಾಂಟಿಕ್ ಆಚೆ ನಮಗೆ ದೃಢ ಪಾಲುದಾರರು ಅಗತ್ಯವಾದಂತೆ ಪೆಸಿಫಿಕ್ ಆಚೆಯೂ ದೃಢ ಪಾಲುದಾರರು ನಮಗೆ ಅಗತ್ಯವಾಗಿದ್ದಾರೆಂದು ಶುಕ್ರವಾರ ನ್ಯೂಯಾರ್ಕ್ ಏಷ್ಯಾ ಸೊಸೈಟಿಯಲ್ಲಿನ ಭಾಷಣದಲ್ಲಿ ಕ್ಲಿಂಟನ್ ಹೇಳಿದರು.
ಒಬಾಮಾ ಕೆಲವು ತುರ್ತಾದ ವಿಷಯಗಳ ಕಡೆ ಗಮನಕೊಡುತ್ತಿರುವುದರಿಂದ ಜಪಾನ್‌ನನ್ನು ಕಡೆಗಣಿಸಬಹುದೆಂಬ ಭಯ ಟೋಕಿಯೊದಲ್ಲಿ ಆವರಿಸಿರುವ ನಡುವೆ, ಅಮೆರಿಕದ ಜತೆ ಜಪಾನ್ ಬಾಂಧವ್ಯ ಗಟ್ಟಿಯಾಗಲಿದೆಯೆಂಬ ಸಂದೇಶವನ್ನು ಕ್ಲಿಂಟನ್ ಮುಟ್ಟಿಸಲಿದ್ದಾರೆ. ಕ್ಲಿಂಟನ್ ಭೇಟಿ ನೀಡುವ ಕಟ್ಟಕಡೆಯ ರಾಷ್ಟ್ರ ಚೀನಾ ಪ್ರವಾಸದ ಹೃದಯಭಾಗವಾಗಿದೆ ಎಂದು ವರದಿಗಾರ ತಿಳಿಸಿದ್ದಾರೆ.
ಕಳೆದ ವರ್ಷ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದ ಕ್ಲಿಂಟನ್, ತಮ್ಮ ವಿದೇಶಾಂಗ ನೀತಿಯ ರೂಪುರೇಷೆಯನ್ನು ಬಿಡಿಸುತ್ತಾ, ಲೇಖನ ಬರೆದಿದ್ದ ಹಿಲರಿ ಕ್ಲಿಂಟನ್, ಈ ಶತಮಾನದಲ್ಲಿ ಚೀನಾ ಜತೆ ತಮ್ಮ ಸಂಬಂಧವು ಅತ್ಯಂತ ಪ್ರಮುಖ ದ್ವಿಪಕ್ಷೀಯ ಸಂಬಂಧವಾಗಿದೆಯೆಂದು ಬಣ್ಣಿಸಿದ್ದರು. ಹವಾಮಾನ ಬದಲಾವಣೆ ಮತ್ತು ಶುದ್ಧ ಇಂಧನ ಮುಂತಾದ ವಿಷಯಗಳ ಬಗ್ಗೆ ಚೀನಾದ ಜತೆ ಸುಮಧುರ ಬಾಂಧವ್ಯಕ್ಕೆ ನಿಜವಾದ ಅವಕಾಶಗಳಿವೆ ಎಂದು ಬಿಬಿಸಿ ಜತೆ ಮಾತನಾಡುತ್ತಾ ಕ್ಲಿಂಟನ್ ತಿಳಿಸಿದ್ದಾರೆ.
ಉತ್ತರ ಕೊರಿಯದ ಪರಮಾಣು ಯೋಜನೆಗಳು, ಆರ್ಥಿಕ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆ ಸಹ ಕ್ಲಿಂಟನ್ ಭೇಟಿಯ ಕಾಲದಲ್ಲಿ ಚರ್ಚೆಯಾಗಲಿದೆ. ಯಾವುದೇ ಪ್ರಚೋದನಾಕಾರಿ ಕ್ರಮದ ವಿರುದ್ಧ ಉತ್ತರ ಕೊರಿಯಕ್ಕೆ ಎಚ್ಚರಿಸಿರುವ ಅವರು, ಉತ್ತರಕೊರಿಯ ಪರಮಾಣು ಕಾರ್ಯಕ್ರಮ ತ್ಯಜಿಸಿದರೆ ಅನೇಕ ಪ್ರೋತ್ಸಾಹಕಗಳನ್ನು ನೀಡುವುದಾಗಿ ಪುನರುಚ್ಚರಿಸಿದ್ದಾರೆ. ಉತ್ತರ ಕೊರಿಯ ದೂರವ್ಯಾಪ್ತಿಯ ಕ್ಷಿಪಣೆ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆಯೆಂಬ ಊಹಾಪೋಹಗಳು ಮಾಧ್ಯಮಗಳಲ್ಲಿ ಹರಡಿರುವ ನಡುವೆ ಹಿಲರಿ ಏಷ್ಯಾ ಪ್ರವಾಸ ಹಮ್ಮಿಕೊಂಡಿದ್ದಾರೆ. |