ಪಾಕಿಸ್ತಾನದ ಪ್ರಕ್ಷುಬ್ಧಪೀಡಿತ ಕುರಮ್ ಬುಡಕಟ್ಟು ಪ್ರದೇಶದಲ್ಲಿರುವ ತಾಲಿಬಾನ್ ಅಡಗುತಾಣದ ಮೇಲೆ ಸೋಮವಾರ ದಾಳಿ ಮಾಡಿದ ಅಮೆರಿಕದ ಪೈಲಟ್ ರಹಿತ ವಿಮಾನಗಳು ಕನಿಷ್ಠ 15 ಜನರನ್ನು ಕೊಂದಿದ್ದು, ಅನೇಕ ಮಂದಿಯನ್ನು ಗಾಯಗೊಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಎರಡನೇ ಪ್ರಮುಖ ದಾಳಿಯೆಂದು ಹೇಳಲಾದ ಈ ಘಟನೆಯಲ್ಲಿ ವಿಮಾನದಿಂದ ಹಾರಿಸಿದ ಎರಡು ಕ್ಷಿಪಣಿಗಳು ಟೆಹ್ರಿಕ್-ಎ-ತಾಲಿಬಾನ್ ಸಭೆ ನಡೆಯುತ್ತಿದ್ದ ಅಡಗುತಾಣಕ್ಕೆ ಬಡಿಯಿತೆಂದು ಟಿವಿ ಚಾನೆಲ್‌ಗಳು ವರದಿ ಮಾಡಿವೆ. ಅಮೆರಿಕದ ವಿಮಾನಗಳು ತಾಲಿಬಾನ್ ಮತ್ತು ಅಲ್ ಖೈದಾ ನೆಲೆಗಳ ಮೇಲೆ ಈ ಮುಂಚೆ ದಾಳಿ ಮಾಡಿದ್ದರೂ, ಕುರ್ರಂ ಪ್ರದೇಶದ ಮೇಲೆ ದಾಳಿ ಮಾಡಿದ್ದು ಇದೇ ಮೊದಲಬಾರಿಯೆಂದು ಹೇಳಲಾಗಿದೆ.
ದಾಳಿ ಮಾಡಿದ ಕೆಲವೇ ನಿಮಿಷಗಳಲ್ಲಿ ತಾಲಿಬಾನಿ ಉಗ್ರರು ಪ್ರದೇಶವನ್ನು ಸುತ್ತುವರಿದು ಸ್ಥಳೀಯರಿಗೆ ದಾಳಿಯ ಸ್ಥಳಕ್ಕೆ ಸಮೀಪಿಸದಂತೆ ಎಚ್ಚರವಹಿಸಿದ್ದಾರೆ. ದಕ್ಷಿಣ ವಾಜಿರಿಸ್ತಾನದಲ್ಲಿ ಇನ್ನೊಂದು ಕ್ಷಿಪಣಿ ಬಡಿದು 32 ಜನರು ಹತರಾದ 2 ದಿನಗಳಲ್ಲೇ ಈ ದಾಳಿ ನಡೆದಿದೆ.
ಕುರ್ರಂ ಏಜೆನ್ಸಿಯು ಶಿಯಾ ಮತ್ತು ಸುನ್ನಿ ಬುಡಕಟ್ಟು ಜನರ ನಡುವೆ ವ್ಯಾಪಕ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದು, ವೈರಿ ಬುಡಕಟ್ಟು ಜನರ ನಡುವೆ ಘರ್ಷಣೆಗಳಲ್ಲಿ ನೂರಾರು ಜನರು ಸತ್ತಿದ್ದಾರೆ. ತಾಲಿಬಾನ್ ಉಗ್ರರು ಇಲ್ಲಿಗೆ ನುಸುಳಿ ಸುನ್ನಿಗಳಿಗೆ ಒತ್ತಾಸೆಯಾಗಿ ನಿಂತ ಬಳಿಕ ಕುರ್ರಂ ಏಜೆನ್ಸಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. |