ಮೂಲಭೂತವಾದಿ ಧರ್ಮಗುರುಗಳ ಬೇಡಿಕೆಗಳಿಗೆ ತಲೆಬಾಗಿರುವ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ವಾಯವ್ಯ ಮುಂಚೂಣಿ ಪ್ರಾಂತ್ಯದ ಕೆಲವು ಭಾಗಗಳು ಸೇರಿದಂತೆ ತಾಲಿಬಾನ್ ಕೈವಶದಲ್ಲಿರುವ ಸ್ವಾಟ್ ಕಣಿವೆಯಲ್ಲಿ ಶರಿಯತ್ ಕಾನೂನಿನ ಜಾರಿಗೆ ಸೋಮವಾರ ಅನುಮತಿ ನೀಡಿದ್ದಾರೆ. ತಾಲಿಬಾನ್ ಪಾಕಿಸ್ತಾನದಲ್ಲಿ ಸ್ವಾಟ್ ಕಣಿವೆ ಸೇರಿದಂತೆ ಬಹುತೇಕ ಭಾಗಗಳನ್ನು ಕೈವಶ ಮಾಡಿಕೊಂಡಿದ್ದು, ಪಾಕಿಸ್ತಾನವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಹವಣಿಸಿದೆ ಎಂದು ಜರ್ದಾರಿ ಕೆಲವು ದಿನಗಳ ಹಿಂದೆ ಶಂಕೆ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಎನ್‌ಡಬ್ಲ್ಯುಎಫ್‌ಪಿ ಸಭೆಯಲ್ಲಿ ತೆಹ್ರಿಕ್-ಎ-ನಿಫಾಜ್‌ನ ಮೂಲಭೂತವಾದಿ ಧರ್ಮಗುರು ಸುಫಿ ಮಹಮದ್ ಖಾನ್ ಬೇಡಿಕೆಗೆ ಜರ್ದಾರಿ ಮಣಿದಿದ್ದು, ಸ್ವಾಟ್ ಸಹಿತ ಇಡೀ ಮಲಾಕಂಡ್ ವಿಭಾಗದಲ್ಲಿ ಶರಿಯತ್ ಕಾನೂನನ್ನು ಹೇರಲು ಅನುಮತಿಸಿದ್ದಾರೆ.ಏತನ್ಮಧ್ಯೆ, ತಾಲಿಬಾನ್ ಜತೆ ಮಾಡಿಕೊಂಡಿರುವ ಶಾಂತಿಒಪ್ಪಂದಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಒಪ್ಪಂದಗಳು ಉಗ್ರರ ಮರುಸಂಘಟನೆಗೆ ಅವಕಾಶ ನೀಡುತ್ತದೆಂದು ವಿದೇಶಾಂಗ ಇಲಾಖೆ ಪ್ರತಿಪಾದಿಸಿದೆ. ಮಲಾಕಂಡ್‌ನಲ್ಲಿ ಅಧ್ಯಕ್ಷರ ಅನುಮತಿಯಿಲ್ಲದೇ ಪ್ರಸಕ್ತ ಕಾಯ್ದೆಗಳ ತಿದ್ದುಪಡಿ ಅಸಾಧ್ಯವಾದ್ದರಿಂದ ಜರ್ದಾರಿ ಅನುಮೋದನೆಗೆ ಕೋರಲಾಗಿತ್ತು.ಎಎನ್‌ಪಿ ಪ್ರಾಂತೀಯ ಸರ್ಕಾರ ಉಗ್ರರ ಜತೆ ಮಾತುಕತೆ ಹಮ್ಮಿಕೊಂಡು ಭವ್ಯವಾದ ಜಿರ್ಗಾ ಕೂಟವನ್ನು ಆಯೋಜಿಸುವುದಾಗಿ ಪ್ರಾಂತೀಯ ಮಾಹಿತಿಸಚಿವ ಇಫ್ತಿಕರ್ ಹುಸೇನ್ ಈ ನಡುವೆ ತಿಳಿಸಿದ್ದಾರೆ. ಮಾತುಕತೆಗೆ ಅನುವಾಗುವಂತೆ ತಾಲಿಬಾನ್ ಭಾನುವಾರ 10 ದಿನಗಳ ಕದನವಿರಾಮ ಘೋಷಿಸಿದೆ.ಟಿಎನ್‌ಎಸ್‌ಎಂ ತರದ ಉಗ್ರಸಂಘಟನೆಯ ಸ್ವಯಂಘೋಷಿತ ಶರಿಯತ್ ಕಾನೂನು ಅನುಷ್ಠಾನಕ್ಕೆ ಕಾನೂನು ತಿದ್ದುಪಡಿಗೆ ಅವಕಾಶ ಕಲ್ಪಿಸುವ ಮೂಲಕ ಸರ್ಕಾರ ಉಗ್ರಗಾಮಿಗಳಿಗೆ ಶರಣಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ.ನಿಯಮಿತ ಕೋರ್ಟ್ ಬದಲಿಗೆ ಇಸ್ಲಾಮಿಕ್ ಕೋರ್ಟ್ ಸ್ಥಾಪಿಸುವುದು ಟಿಎನ್‌ಎಸ್‌ಎಂ ಮುಖ್ಯಬೇಡಿಕೆಯಾಗಿತ್ತು. |