ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳು ಮುಖಾಮುಖಿ ಡಿಕ್ಕಿಯಾದ ಘಟನೆ ಸಂಭವಿಸಿದ ಬೆನ್ನಲ್ಲೇ, ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯುತ್ತಿದ್ದ ಬ್ರಿಟನ್ ಮತ್ತು ಫ್ರೆಂಚ್ ಪರಮಾಣು ಜಲಾಂತರ್ಗಾಮಿ ನೌಕೆಗಳು ಅಟ್ಲಾಂಟಿಕ್ ಸಾಗರದಲ್ಲಿ ಡಿಕ್ಕಿಹೊಡೆದ ಘಟನೆ ತಿಂಗಳಾರಂಭದಲ್ಲಿ ಘಟಿಸಿದ್ದು, ಸಾವುನೋವು ಸಂಭವಿಸಿಲ್ಲವೆಂದು ವರದಿಯಾಗಿದೆ.
ರಾಯಲ್ ನೇವಿಯ ಟ್ರೈಡೆಂಟ್ ಕ್ಲಾಸ್ ಎಚ್‌ಎಂಎಸ್ ವ್ಯಾನ್‌ಗಾರ್ಡ್ ಮತ್ತು ಫ್ರೆಂಚ್ ನೌಕಾದಳದ ನ್ಯೂ ಲೆ ಟ್ರಿಯೋಫಾಂಟ್ ಕ್ಲಾಸ್ ಜಲಾಂತರ್ಗಾಮಿಗಳಿಗೆ ಈ ಘಟನೆಯಲ್ಲಿ ಹಾನಿಯಾಗಿದ್ದು, ಅಣ್ವಸ್ತ್ರ ಸ್ಥಾವರ ಅಥವಾ ಶಸ್ತ್ರಗಳಿಗೆ ಹಾನಿಯಾದ ಬಗ್ಗೆ ಅಥವಾ ಸಾವುನೋವಿನ ಬಗ್ಗೆ ತಿಳಿದು ಬಂದಿಲ್ಲ. ಸುಮಾರು 250 ನಾವಿಕರನ್ನು ಹೊತ್ತೊಯ್ಯುತ್ತಿದ್ದ ಎರಡೂ ನೌಕೆಗಳು ಬಹುಶಃ ಫೆ.3 ಅಥವಾ 4ರಂದು ಡಿಕ್ಕಿಯಾದ ಬಳಿಕ ಮುಳುಗಿದವೆಂದು ಹೇಳಲಾಗಿದೆ.
ಎಚ್‌ಎಂಎಸ್ ವ್ಯಾನ್‌ಗಾರ್ಡ್ ಬ್ರಿಟನ್ ಮಿಲಿಟರಿಯ ನಾಲ್ಕು ಪರಮಾಣು ಜಲಾಂತರ್ಗಾಮಿಗಳಲ್ಲಿ ಒಂದಾಗಿದ್ದು, ಅಣ್ವಸ್ತ್ರ ಪ್ರತಿರೋಧಕವಾಗಿ ಕಣ್ಗಾವಲು ಕಾಯುತ್ತಿದೆ. ಪ್ರತಿಯೊಂದು ನೌಕೆ 150 ಮೀಟರ್ ಉದ್ದ, ಮತ್ತು 13 ಮೀ ವ್ಯಾಸ ಹೊಂದಿದ್ದು, 48 ಅಣ್ವಸ್ತ್ರ ಸಿಡಿತಲೆ ಸೇರಿದಂತೆ 16 ಕ್ಷಿಪಣಿಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಅಣ್ವಸ್ತ್ರ ಸ್ಫೋಟ ಉಂಟಾಗುವ ಸಾಧ್ಯತೆ ಇಲ್ಲವಾದರೂ ಅಣುವಿಕಿರಣ ಸೋರಿಕೆ ಸಾಧ್ಯತೆಯಿದ್ದು, ನಾವು ಸಿಬ್ಬಂದಿ ಮತ್ತು ಸಿಡಿತಲೆ ಕಳೆದುಕೊಂಡಿದ್ದರೆ ಅದು ರಾಷ್ಟ್ರೀಯ ದುರಂತ ಎನಿಸುತ್ತಿತ್ತೆಂದು ರಾಯಲ್ ನೇವಿಯ ಹಿರಿಯ ಅಧಿಕಾರಿ ಮೂಲ ತಿಳಿಸಿದೆ. |